​ಸಂಚಾರ ನಿಯಮ ಉಲ್ಲಂಘನೆಗೆ ಭಾರಿ ದಂಡ: ಗಡ್ಕರಿ ಹೇಳಿದ್ದೇನು?

Update: 2019-09-06 04:00 GMT

ಹೊಸದಿಲ್ಲಿ, ಸೆ.6: ಮೋಟಾರು ವಾಹನ ತಿದ್ದುಪಡಿ ಕಾಯ್ದೆಯ ಅನ್ವಯ ಸಂಚಾರ ನಿಯಮ ಉಲ್ಲಂಘನೆಗೆ ಭಾರಿ ದಂಡ ವಿಧಿಸುವ ಕ್ರಮವನ್ನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಈ ಕ್ರಮವನ್ನು ಒಂದು ವರ್ಗದ ಜನ ಟೀಕಿಸಿದರೂ, ಒತ್ತಡಕ್ಕೆ ನಮ್ಮ ಸಚಿವಾಲಯ ಮಣಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

"ದೊಡ್ಡ ಮೊತ್ತದ ದಂಡ ವಿಧಿಸುವುದು ಸರ್ಕಾರಕ್ಕೆ ಇಷ್ಟವಿಲ್ಲ; ಆದರೆ ಕಾನೂನಿಗೆ ಗೌರವ ಮತ್ತು ಕಾನೂನಿನ ಬಗ್ಗೆ ಭಯ ಬೇಕು" ಎಂದು ಹೇಳಿದರು. ಲೈಸೆನ್ಸ್ ಇಲ್ಲದ ಅಥವಾ ಒಬ್ಬ ಪಾನಮತ್ತ ಚಾಲಕ ಅಪಘಾತ ಎಸಗಿದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ದಂಡ ಮಿತಿ ಹೆಚ್ಚಿಸುವ ಅಪೇಕ್ಷೆ ಸರ್ಕಾರದ್ದಲ್ಲ; ಪ್ರತಿಯೊಬ್ಬರೂ ನಿಯಮ ಪಾಲಿಸಬೇಕು; ಯಾರಿಗೂ ದಂಡನೆಯಾಗಬಾರದು ಎಂಬ ಪರಿಸ್ಥಿತಿ ನಿರ್ಮಾಣವಾಗಬೇಖು. ವರ್ಷಕ್ಕೆ 5 ಲಕ್ಷದಷ್ಟು ಅಪಘಾತಗಳು ದೇಶದಲ್ಲಿ ಸಂಭವಿಸುತ್ತವೆ. ಇದರಲ್ಲಿ ಜೀವ ಕಳೆದುಕೊಳ್ಳುವ ಶೇಕಡ 65ರಷ್ಟು ಮಂದಿ 18-35 ವರ್ಷ ವಯೋಮಿತಿಯವರು. ಜನರ ಜೀವ ರಕ್ಷಿಸಬೇಡವೇ? ಕಾನೂನಿಗೆ ಗೌರವ ಮತ್ತು ಕಾನೂನಿನ ಬಗ್ಗೆ ಭೀತಿ ಬೇಕು. ದೊಡ್ಡ ಮೊತ್ತದ ದಂಡ ವಿಧಿಸುವುದು ಮುಂದಿನ ಕೆಲ ತಿಂಗಳಲ್ಲಿ ಉತ್ತಮ ಫಲಿತಾಂಶ ನೀಡುತ್ತದೆ ಎಂಬ ಭರವಸೆ ನನಗಿದೆ" ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News