ಇನ್ನೊಮ್ಮೆ ಬ್ರೆಕ್ಸಿಟ್ ಮುಂದೂಡುವ ಬದಲು ಸಾಯುವುದೇ ಒಳ್ಳೆಯದು

Update: 2019-09-06 16:42 GMT

ಲಂಡನ್, ಸೆ. 6: ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವುದನ್ನು (ಬ್ರೆಕ್ಸಿಟ್) ಮುಂದಿನ ತಿಂಗಳ ಬಳಿಕವೂ ಮುಂದೂಡುವ ಬದಲು ನಾನು ಸಾಯಲು ಇಷ್ಟಪಡುತ್ತೇನೆ ಎಂದು ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ಗುರುವಾರ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ, ಮಧ್ಯಂತರ ಚುನಾವಣೆಗೆ ಬೆಂಬಲ ನೀಡುವಂತೆ ಅವರು ತನ್ನ ಬ್ರೆಕ್ಸಿಟ್ ಯೋಜನೆಯನ್ನು ವಿರೋಧಿಸುತ್ತಿರುವ ಪ್ರತಿಪಕ್ಷ ಸಂಸದರನ್ನು ಒತ್ತಾಯಿಸಿದರು.

ಐರೋಪ್ಯ ಒಕ್ಕೂಟದೊಂದಿಗೆ ಒಪ್ಪಂದವಿಲ್ಲದೆ ಬ್ರಿಟನ್ ಹೊರಬರುವುದನ್ನು ತಡೆಯುವ ಮಸೂದೆಯೊಂದನ್ನು ಹೌಸ್ ಆಫ್ ಕಾಮನ್ಸ್‌ನಲ್ಲಿ ಸಂಸದರು ಈ ವಾರ ಅಂಗೀಕರಿಸಿದ್ದಾರೆ. ಅಷ್ಟೇ ಅಲ್ಲದೆ, ದೇಶದ ರಾಜಕೀಯ ಬಿಕ್ಕಟ್ಟನ್ನು ಪರಿಹಿಸುವುದಕ್ಕಾಗಿ ಮಧ್ಯಂತರ ಚುನಾವಣೆಯನ್ನು ನಡೆಸುವ ಜಾನ್ಸನ್‌ರ ಕರೆಯನ್ನೂ ಪ್ರತಿಪಕ್ಷ ಸಂಸದರು ತಿರಸ್ಕರಿಸಿದ್ದಾರೆ.

‘‘ಬ್ರೆಕ್ಸಿಟನ್ನು ಇನ್ನೊಮ್ಮೆ ಮುಂದೂಡುವಂತೆ ಐರೋಪ್ಯ ಒಕ್ಕೂಟವನ್ನು ಕೇಳುವ ಬದಲು ನಾನು ಸಾಯುತ್ತೇನೆ’’ ಎಂದು ಉತ್ತರ ಇಂಗ್ಲೆಂಡ್‌ನಲ್ಲಿರುವ ವೇಕ್‌ಫೀಲ್ಡ್ ನಗರದಲ್ಲಿ ಮಾಡಿದ ಭಾಷಣವೊಂದರಲ್ಲಿ ಜಾನ್ಸನ್ ಹೇಳಿದ್ದಾರೆ.

‘‘ನಾವು ಐರೋಪ್ಯ ಒಕ್ಕೂಟದಿಂದ ಅಕ್ಟೋಬರ್ 31ರಂದು ಹೊರಗೆ ಬರಲೇಬೇಕು’’ ಎಂದು ಕನ್ಸರ್ವೇಟಿವ್ ಪಕ್ಷದ ನಾಯಕರೂ ಆಗಿರುವ ಅವರು ನುಡಿದರು.

ಬ್ರಿಟಿಶ್ ಸಂಸತ್ತು ಅಮಾನತು ಪ್ರಶ್ನಿಸಿದ ಅರ್ಜಿ ಹೈಕೋರ್ಟ್‌ನಲ್ಲಿ ವಜಾ

ಬ್ರೆಕ್ಸಿಟ್‌ಗೆ ಮುನ್ನ ಬ್ರಿಟಿಶ್ ಸಂಸತ್ತನ್ನು ಅಮಾನತಿನಲ್ಲಿಡುವ ಬ್ರಿಟಿಶ್ ಪ್ರಧಾನಿ ಬೊರಿಸ್ ಜಾನ್ಸನ್‌ರ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ಲಂಡನ್ ಹೈಕೋರ್ಟ್ ಶುಕ್ರವಾರ ತಿರಸ್ಕರಿಸಿದೆ. ಆದರೆ, ಈ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಬಹುದಾಗಿದೆ ಎಂದು ಹೈಕೋರ್ಟ್ ಹೇಳಿದೆ.

 ಸೆಪ್ಟಂಬರ್ ಮಧ್ಯ ಭಾಗದಿಂದ ಅಕ್ಟೋಬರ್ ಮಧ್ಯ ಭಾಗದವರೆಗೆ ಸಂಸತ್ತನ್ನು ಅಮಾನತಿನಲ್ಲಿಡುವುದಾಗಿ ಆಗಸ್ಟ್ ಕೊನೆಯಲ್ಲಿ ಜಾನ್ಸನ್ ಹೇಳಿದ್ದರು. ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರಲು ಅಕ್ಟೋಬರ್ 31 ಕೊನೆಯ ದಿನವಾಗಿದೆ.

 ಬ್ರೆಕ್ಸಿಟ್‌ಗೆ ಪೂರ್ವಭಾವಿಯಾಗಿ ಸರಕಾರವು ನೂತನ ಶಾಸನಾತ್ಮಕ ಕಾರ್ಯಕ್ರಮವೊಂದನ್ನು ಘೋಷಿಸಲು ಸಾಧ್ಯವಾಗುವಂತೆ ಸಂಸತ್ತನ್ನು ಅಮಾನತಿನಲ್ಲಿಡಲು ಪ್ರಧಾನಿ ಬೊರಿಸ್ ಜಾನ್ಸನ್ ಬಯಸಿದ್ದಾರೆ.

ಸಂಸತ್ತಿನ ಅಮಾನತನ್ನು ಪ್ರಶ್ನಿಸಿ, ಬ್ರೆಕ್ಸಿಟ್ ವಿಷಯದಲ್ಲಿ ಎರಡು ವರ್ಷಗಳ ಹಿಂದೊಮ್ಮೆ ಸರಕಾರವನ್ನು ಸೋಲಿಸಿದ್ದ ಗಿನಾ ಮಿಲ್ಲರ್ ಕಾನೂನು ಹೋರಾಟ ಆರಂಭಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News