ಕುಂ. ವೀರಭದ್ರಪ್ಪ ಕಾದಂಬರಿ ಆಧಾರಿತ ಚಿತ್ರದಲ್ಲಿ ಪುನೀತ್

Update: 2019-09-07 15:48 GMT

ಸದ್ಯ ‘ಯುವರತ್ನ’ ಚಿತ್ರದಲ್ಲಿ ಬ್ಯುಸಿಯಾಗಿರುವ ಪುನೀತ್ ರಾಜ್‌ಕುಮಾರ್ ಆನಂತರ ಕಾದಂಬರಿಯಾಧಾರಿತ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆಂಬ ಮಾತುಗಳು ಸ್ಯಾಂಡಲ್‌ವುಡ್‌ನಲ್ಲಿ ಕೇಳಿಬರುತ್ತಿವೆ. ಕುಂ. ವೀರಭದ್ರಪ್ಪ ಅವರ ‘ಕನಕಾಂಗಿ ಕಲ್ಯಾಣ’ ಕಾದಂಬರಿಯಾಧಾರಿತ ಚಿತ್ರದಲ್ಲಿ ಅವರು ನಟಿಸುವುದು ಬಹುತೇಕ ಖಚಿತವಾಗಿದೆ.

ಹಾಗೆ ನೋಡಿದರೆ ‘ಜಾಕಿ’ ಚಿತ್ರದ ಚಿತ್ರೀಕರಣದ ಸಮಯದಲ್ಲೇ ಪಾರ್ವತಮ್ಮ ರಾಜ್‌ಕುಮಾರ್ ಅವರು ‘ಕನಕಾಂಗಿ ಕಲ್ಯಾಣ’ ಕಾದಂಬರಿಯನ್ನು ಚಿತ್ರ ಮಾಡುವ ಬಗ್ಗೆ ಆಸಕ್ತಿ ತೋರಿಸಿದ್ದಾರಂತೆ. ಈ ಚಿತ್ರದ ಬಗ್ಗೆ ಜಾಕಿ ಚಿತ್ರದ ನಿರ್ದೇಶಕ ಸೂರಿ ಅವರಲ್ಲಿ ಚರ್ಚಿಸಿಯೂ ಇದ್ದರಂತೆ. ಆದರೆ ಪಾರ್ವತಮ್ಮ ನಿಧನರಾದ ಬಳಿಕ ‘ಕನಕಾಂಗಿ ಕಲ್ಯಾಣ’ ನನೆಗುದಿಗೆ ಬಿದ್ದಿತ್ತು. ಇದೀಗ ಆ ಕಾದಂಬರಿ ಚಿತ್ರವಾಗಲಿರುವ ಸಾಧ್ಯತೆ ಮತ್ತೆ ಚಿಗುರಿಕೊಂಡಿದೆ.

ಈ ಚಿತ್ರವನ್ನು ದುನಿಯಾ ಸೂರಿ ಅಥವಾ ಹೆಬ್ಬುಲಿ ಖ್ಯಾತಿಯ ಕೃಷ್ಣ ನಿರ್ದೇಶಿಸಲಿದ್ದಾರಂತೆ. ಪ್ರಸಕ್ತ ಪಾಪ್‌ಕಾರ್ನ್ ಮಂಕಿ ಟೈಗರ್ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಸೂರಿ, ಆನಂತರ ಕನಕಾಂಗಿ ಕಲ್ಯಾಣ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆನ್ನಲಾಗಿದೆ.

ಆದರೆ ಇನ್ನೊಂದು ಮೂಲಗಳ ಪ್ರಕಾರ ಕನಕಾಂಗಿ ಕಲ್ಯಾಣ ಚಿತ್ರದ ನಿರ್ದೇಶಿಸಲು ದುನಿಯಾ ಸೂರಿ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ತಾನು ಆ ಕಾದಂಬರಿಯನ್ನು ಓದಿದ್ದು, ಅದರಲ್ಲಿ ಆನೆಗಳನ್ನು ಪಳಗಿಸುವ ಮತ್ತು ಹಿಂದಿನ ಕಾಲವನ್ನು ಮರುಸೃಷ್ಟಿಸಲು ಸಾಕಷ್ಟು ಕಾಲಾವಕಾಶ ಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ ‘ಹೆಬ್ಬುಲಿ’ ಚಿತ್ರದ ನಿರ್ದೇಶಕ ಕೃಷ್ಣ ಅವರು ‘ಕನಕಾಂಗಿ ಕಲ್ಯಾಣ’ವನ್ನು ನಿರ್ದೇಶಿಸುವ ಬಗ್ಗೆ ಆಸಕ್ತಿ ತೋರಿದ್ದಾರಂತೆ. ಗಜಕೇಸರಿ ಚಿತ್ರವನ್ನು ನಿರ್ದೇಶಿಸಿದ ಬಳಿಕ ಐತಿಹಾಸಿಕ ಕಥಾವಸ್ತುವಿನ ಚಿತ್ರಗಳ ಬಗ್ಗೆ ಒಲವು ಬೆಳೆಸಿಕೊಂಡಿರುವ ಕೃಷ್ಣ , ‘ಕನಕಾಂಗಿ ಕಲ್ಯಾಣ’ವನ್ನು ನಿರ್ದೇಶಿಸಲು ಮನಸ್ಸು ಮಾಡಿದ್ದಾರೆ.

ಒಟ್ಟಿನಲ್ಲಿ ದುನಿಯಾ ಸೂರಿ ಅಥವಾ ಕೃಷ್ಣ ಇವರಿಬ್ಬರಲ್ಲಿ ಯಾರು ಕನಕಾಂಗಿ ಕಲ್ಯಾಣವನ್ನು ನಿರ್ದೇಶಿಸಲಿದ್ದಾರೆಂಬುದೇ ಸದ್ಯದ ಕುತೂಹಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News