ನಾಪತ್ತೆಯಾಗಿದ್ದ ಮಕ್ಕಳ ಮೃತದೇಹ ಹಳ್ಳದಲ್ಲಿ ಪತ್ತೆ: ರೊಚ್ಚಿಗೆದ್ದ ಗ್ರಾಮಸ್ಥರಿಂದ ಪೊಲೀಸರ ಮೇಲೆ ಹಲ್ಲೆ

Update: 2019-09-08 14:00 GMT

ಪಾಟ್ನಾ: ಎರಡು ದಿನಗಳಿಂದ ನಾಪತ್ತೆಯಾಗಿದ್ದ ಇಬ್ಬರು ಮಕ್ಕಳ ದೇಹಗಳು ಹಳ್ಳದಲ್ಲಿ ಪತ್ತೆಯಾದ ಘಟನೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು ಪೊಲೀಸರನ್ನು ಒತ್ತೆಯಾಳುಗಳಾಗಿಟ್ಟುಕೊಂಡು ಅವರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಘಟನೆಯಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದು, ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೂಗಿನಲ್ಲಿ ರಕ್ತ ಸುರಿಯುತ್ತಿರುವ ಪೊಲೀಸ್ ಪೇದೆಯ ಸಮವಸ್ತ್ರಗಳು ಚಿಂದಿಯಾಗಿರುವ ದೃಶ್ಯಾವಳಿ ಮೊಬೈಲ್ ಕ್ಯಾಮೆರಾದಲ್ಲಿ ಚಿತ್ರೀಕರಿಸಲಾದ ವಿಡಿಯೊದಲ್ಲಿ ಕಂಡುಬರುತ್ತದೆ. ಪೊಲೀಸರ ಸುತ್ತ ದೊಡ್ಡ ಬಿದಿರಿನ ಬಡಿಗೆಗಳನ್ನು ಹಿಡಿದ ಉದ್ರಿಕ್ತ ಗುಂಪು ಕೂಡಾ ಕಾಣಿಸುತ್ತಿದೆ. ಗ್ರಾಮಸ್ಥರನ್ನು ಸಮಾಧಾನಪಡಿಸಲು ಪೊಲೀಸ್ ಪೇದೆ ಪ್ರಯತ್ನಿಸುತ್ತಿದ್ದಾರೆ. ಆದರೆ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. ಗುಂಪಿನಿಂದ ತಪ್ಪಿಸಿಕೊಳ್ಳಲು ಪೊಲೀಸ್ ಪೇದೆ ಪ್ರಯತ್ನ ನಡೆಸಿದರೂ, ಓಡಿಸಿಕೊಂಡು ಹೋಗಿ ಹೊಡೆಯುತ್ತಿರುವ ದೃಶ್ಯ ಇದೆ.

ಮುಝಾಫರ್ ಪುರ ಜಿಲ್ಲೆಯ ಔರಿಯಲ್ಲಿ ಶನಿವಾರ ಎರಡು ಮೃತದೇಹಗಳು ಪತ್ತೆಯಾದ ಬಳಿಕ ಗ್ರಾಮಸ್ಥರು ಪೊಲೀಸ್ ಠಾಣೆಯ ಹೊರಗೆ ಬೀದಿಗಳಲ್ಲಿ ಜಮಾಯಿಸಿದರು. ಈ ಘಟನೆಯಿಂದ ವಿಚಲಿತರಾದ ಪೊಲೀಸರನ್ನು ಒತ್ತೆಯಾಳುಗಳಾಗಿ ಹಿಡಿದಿಟ್ಟುಕೊಂಡು ಚೆನ್ನಾಗಿ ಥಳಿಸಿದರು ಎನ್ನಲಾಗಿದೆ.  ಅಪರಿಚಿತರು ಹೊಡೆದು ಇಬ್ಬರನ್ನು ಕೊಂದಿದ್ದಾರೆ ಎನ್ನುವುದು ಗ್ರಾಮಸ್ಥರ ವಾದ. ಆದರೆ ನೀರಿನಲ್ಲಿ ಮುಳುಗಿ ಅವರು ಮೃತಪಟ್ಟಿದ್ದಾರೆ ಎನ್ನುವುದು ಪೊಲೀಸರ ಸಮರ್ಥನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News