ಲಂಚ ಸ್ವೀಕರಿಸಿದ ಆರೋಪ: ತ್ರಿಪುರ ವಿವಿ ಉಪಕುಲಪತಿ ಅಮಾನತು

Update: 2019-09-08 14:16 GMT

ಅಗರ್ತಲ, ಸೆ.8: ತ್ರಿಪುರ ವಿವಿಯ ಉಪಕುಲಪತಿ ವಿಎಲ್ ಧರೂರ್ಕರ್ ಲಂಚ ಸ್ವೀಕರಿಸುತ್ತಿರುವ ವೀಡಿಯೊ ತುಣುಕು ವೈರಲ್ ಆದ ಹಿನ್ನೆಲೆಯಲ್ಲಿ ಅವರನ್ನು ಹುದ್ದೆಯಿಂದ ಮುಕ್ತಗೊಳಿಸಲಾಗಿದೆ ಎಂದು ಮಾನವ ಸಂಪನ್ಮೂಲ ಇಲಾಖೆಯ ಹೇಳಿಕೆ ತಿಳಿಸಿದೆ. ವಿವಿಗೆ ಸಂಬಂಧಿಸಿದ 60 ಲಕ್ಷ ರೂ. ಮೊತ್ತದ ಒಂದು ಕಾಮಗಾರಿಯ ಗುತ್ತಿಗೆಯನ್ನು ಕೋಲ್ಕತಾ ಮೂಲದ ಪ್ರಿಂಟಿಂಗ್ ಸಂಸ್ಥೆಗೆ ವಹಿಸಿ ಕೊಡಲು ಧರೂರ್ಕರ್ ಲಂಚ ಸ್ವೀಕರಿಸುತ್ತಿರುವ ವೀಡಿಯೊ ದೃಶ್ಯಾವಳಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಧರೂರ್ಕರ್ 2018ರ ಜುಲೈಯಲ್ಲಿ ವಿವಿ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಇದೊಂದು ತನ್ನ ಹೆಸರು ಕೆಡಿಸುವ ಉದ್ದೇಶದಿಂದ ತಿರುಚಿರುವ ವೀಡಿಯೊ ಆಗಿದೆ. ತನ್ನನ್ನು ಅಮಾನತು ಮಾಡಿಲ್ಲ, ಜೀವಬೆದರಿಕೆ ಇರುವ ಕಾರಣ ತಾನೇ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ ಎಂದು ಧರೂರ್ಕರ್ ಮಾಧ್ಯಮಗಳಿಗೆ ಹೇಳಿದ್ದಾರೆ. ಈ ಷಡ್ಯಂತ್ರ ರೂಪಿಸಿದವರು ವಿವಿಯ ಮಾಜಿ ಪ್ರಭಾರಿ ರಿಜಿಸ್ಟ್ರಾರ್ ಶಾಂತಿ ದೇಬರಾಯ್. ಅವರು ಸ್ನಾತಕೋತ್ತರ ಪದವಿ ಹೊಂದಿಲ್ಲದ ಕಾರಣ ಅವರನ್ನು ಸಹಾಯಕ ರಿಜಿಸ್ಟ್ರಾರ್ ಹುದ್ದೆಗೆ ಹಿಂಭಡ್ತಿ ನೀಡಿದ್ದೆ ಹಾಗೂ ರಿಜಿಸ್ಟ್ರಾರ್ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದ ದೇಬರಾಯ್ಗೆ ಅಲ್ಲಿಯೂ ಸೋಲಾಗಿತ್ತು ಎಂದು ಧರೂರ್ಕರ್ ಹೇಳಿದ್ದಾರೆ. ಅಲ್ಲದೆ ದೇಬರಾಯ್ ಒಳಗೊಂಡಿರುವ 10 ಕೋಟಿ ರೂ. ಮೊತ್ತದ ಇ-ಪುಸ್ತಕ ಹಗರಣವೂ ತನ್ನ ವಿರುದ್ಧದ ಷಡ್ಯಂತ್ರಕ್ಕೆ ಕಾರಣವಾಗಿದೆ. ವಿವಿಯಲ್ಲಿ ಮಹಾವೀರ ಪೀಠವನ್ನು ಆರಂಭಿಸಲು ನಿರ್ಧರಿಸಲಾಗಿದ್ದು ಇದಕ್ಕೆ ಕೋಲ್ಕತಾದ ಮೂಲದ ವ್ಯಕ್ತಿಯೊಬ್ಬ 30 ಲಕ್ಷ ದೇಣಿಗೆ ನೀಡುವುದಾಗಿ ಹೇಳಿದ್ದ. ಆತನಿಂದ ಹಣ ಪಡೆಯುತ್ತಿರುವುದನ್ನು ವೀಡಿಯೊ ಚಿತ್ರೀಕರಿಸಿ ಲಂಚ ಸ್ವೀಕರಿಸಿದ ಆರೋಪ ಹೊರಿಸಲಾಗಿದೆ ಎಂದವರು ಹೇಳಿದ್ದಾರೆ. ತನ್ನ ಮೇಲಿನ ಆರೋಪವನ್ನು ದೇಬರಾಯ್ ನಿರಾಕರಿಸಿದ್ದಾರೆ. ಈ ಮಧ್ಯೆ ಹೇಳಿಕೆ ನೀಡಿರುವ ವಿವಿಯ ಅಧಿಕಾರಿಯೊಬ್ಬರು, ರಾಜೀನಾಮೆ ನೀಡುವಂತೆ ಮಾನವ ಸಂಪನ್ಮೂಲ ಇಲಾಖೆ ನೀಡಿದ್ದ ಸೂಚನೆಯನ್ನು ದಾರುರ್ಕರ್ ನಿರ್ಲಕ್ಷಿಸಿದ್ದರು. ಆದ್ದರಿಂದ ಶನಿವಾರ ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಿ ಹುದ್ದೆ ವಹಿಸಿಕೊಳ್ಳುವಂತೆ ಹಿರಿಯ ಪ್ರೊಫೆಸರ್ ಸಂಗ್ರಾಮ್ ಸಿಂಗ್ಗೆ ಸೂಚಿಸಲಾಗಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News