ಕಾಶ್ಮೀರದಲ್ಲಿ ಮೊಹರಂ ಮೆರವಣಿಗೆಗಳಿಗೆ ನಿಷೇಧ: ಕಣಿವೆಯ ಹಲವಾರು ಕಡೆ ನಿರ್ಬಂಧ ಮರುಹೇರಿಕೆ
ಶ್ರೀನಗರ,ಸೆ.6: ಕಾಶ್ಮೀರದಲ್ಲಿ ಮೊಹರಂ ಮೆರವಣಿಗೆಗಳನ್ನು ನಿಷೇಧಿಸಿರುವ ಜಮ್ಮು-ಕಾಶ್ಮೀರ ಆಡಳಿತವು,ರವಿವಾರ ಕಣಿವೆಯ ಹಲವಾರು ಭಾಗಗಳಲ್ಲಿ ನಿರ್ಬಂಧಗಳನ್ನು ಮರುಜಾರಿಗೊಳಿಸಿದೆ. ಕರ್ಬಲಾ ಯುದ್ಧದಲ್ಲಿ ಪ್ರವಾದಿ ಮುಹಮ್ಮದ್(ಸ.ಅ.) ಅವರ ಮೊಮ್ಮಗ ಇಮಾಂ ಹುಸೇನ್ ಅವರ ಬಲಿದಾನದ ಸ್ಮರಣಾರ್ಥ ಶಿಯಾ ಮುಸ್ಲಿಮರು ಮೊಹರಂ ಮೆರವಣಿಗೆಗಳನ್ನು ಸಂಘಟಿಸುತ್ತಾರೆ.
ಶ್ರೀನಗರದ ಲಾಲಚೌಕ್ ಮತ್ತು ಸುತ್ತುಮುತ್ತಲಿನ ಪ್ರದೇಶಗಳಲ್ಲಿ ಭಾರೀ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಎಲ್ಲ ಪ್ರವೇಶ ಮಾರ್ಗಗಳಲ್ಲಿ ಮುಳ್ಳುತಂತಿಗಳ ಬ್ಯಾರಿಕೇಡ್‌ಗಳನ್ನು ಅಳವಡಿಸುವ ಮೂಲಕ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ. ವೈದ್ಯಕೀಯ ತುರ್ತು ಕಾರ್ಯಗಳಿಗಾಗಿ ತೆರಳುತ್ತಿರುವವರಿಗೆ ಮಾತ್ರ ಬ್ಯಾರಿಕೇಡ್‌ಗಳನ್ನು ದಾಟಲು ಅವಕಾಶ ನೀಡಲಾಗುತ್ತಿದೆ. ಆದರೆ,ಶಿಯಾ ಬಾಹುಳ್ಯದ ಪ್ರದೇಶಗಳಾದ ಝಾದಿಬಾಲ್,ಬುಡ್ಗಾಮ್ ಮತ್ತು ಹಸ್ನಾಬಾದ್‌ಗಳಲ್ಲಿ ಮೆರವಣಿಗೆಗಳಿಗೆ ಅವಕಾಶ ನೀಡಲಾಗುವುದು ಎಂದು ಸುದ್ದಿಸಂಸ್ಥೆಯು ತಿಳಿಸಿದೆ.
ನಿರ್ಬಂಧಗಳನ್ನೇಕೆ ಮರುಹೇರಲಾಗಿದೆ ಎನ್ನುವುದನ್ನು ಅಧಿಕಾರಿಗಳು ಸ್ಪಷ್ಟವಾಗಿ ಉಲ್ಲೇಖಿಸಿಲ್ಲ. ‘ಸಿಆರ್‌ಪಿಸಿಯ ಕಲಂ 144ರ ಜಾರಿಯ ಹಿನ್ನೆಲೆಯಲ್ಲಿ ಮತ್ತು ಯಾವುದೇ ಜೀವ ಮತ್ತು ಆಸ್ತಿ ಹಾನಿಯನ್ನು ತಪ್ಪಿಸಲು ಶ್ರೀನಗರ ಜಿಲ್ಲೆಯಲ್ಲಿ ಸೆ.8,9 ಮತ್ತು 10ರಂದು ಮೊಹರಂ ಮೆರವಣಿಗೆಗಳಿಗೆ ಅವಕಾಶ ನೀಡದಿರಲು ಸರಕಾರವು ನಿರ್ಧರಿಸಿದೆ ’ ಎಂದು ಸರಕಾರಿ ಆದೇಶದಲ್ಲಿ ತಿಳಿಸಲಾಗಿದೆ.
ಭಾರೀ ಸಂಖ್ಯೆಯಲ್ಲಿ ಜನರು ಸೇರುವುದು ಹಿಂಸೆಗೆ ಕಾರಣವಾಗಬಹುದು ಎಂದು ಅಧಿಕಾರಿಗಳು ಆತಂಕಗೊಂಡಿರುವುದರಿಂದ ನಿರ್ಬಂಧಗಳನ್ನು ಮರುಜಾರಿಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಸಾಂಪ್ರದಾಯಿಕವಾಗಿ ಶಿಯಾ ಸಮುದಾಯವು ನಗರದ ಲಾಲಚೌಕ್‌ನಿಂದ ದಾಲ್‌ಗೇಟ್‌ವರೆಗೆ ಮೊಹರಂ ಮೆರವಣಿಗೆಯನ್ನು ನಡೆಸುತ್ತಿತ್ತು. 1989ರಲ್ಲಿ ಉಗ್ರವಾದವು ಉತ್ತುಂಗದಲ್ಲಿದ್ದಾಗ ಮೆರವಣಿಗೆಯು ಭಾರತ ವಿರೋಧಿ ಪ್ರತಿಭಟನೆಗಾಗಿ ಬಳಕೆಯಾಗುತ್ತಿದ್ದರಿಂದ ಅದನ್ನು ನಿಷೇಧಿಸಲಾಗಿತ್ತು.
ಪತ್ರಕರ್ತರಿಗೆ ಗಾಯ
ಹಸ್ನಾಬಾದ್‌ನಲ್ಲಿ ಶನಿವಾರ ಪ್ರತಿಭಟನಾಕಾರರು ಮತ್ತು ಭದ್ರತಾ ಸಿಬ್ಬಂದಿಗಳ ನಡುವೆ ಘರ್ಷಣೆಯಲ್ಲಿ ಓರ್ವ ಫೋಟೊಜರ್ನಲಿಸ್ಟ್ ಪೆಲೆಟ್ ಗುಂಡುಗಳಿಂದ ಗಾಯಗೊಂಡಿದ್ದಾರೆ. ಪ್ರತಿಭಟನಾ ಮೆರವಣಿಗೆಯ ದೃಶ್ಯವನ್ನು ಸೆರೆಹಿಡಿಯದಂತೆ ಅವರ ಕ್ಯಾಮೆರಾವನ್ನು ಪೊಲೀಸರು ಮೊದಲೇ ಒಡೆದು ಹಾಕಿದ್ದರು. ಘಟನೆಯಲ್ಲಿ ಇತರ ಮೂವರು ಪತ್ರಕರ್ತರೂ ಗಾಯಗೊಂಡಿದ್ದಾರೆ ಎಂದು ‘ದಿ ಪ್ರಿಂಟ್’ ವರದಿ ಮಾಡಿದೆ.