ತೀವ್ರ ಆರ್ಥಿಕ ಸಂಕಷ್ಟ: ಶೇ.30ರಷ್ಟು ಗುತ್ತಿಗೆ ನೌಕರಿ ಕಡಿತಕ್ಕೆ ಬಿಎಸ್ಸೆನ್ನೆಲ್ ನಿರ್ಧಾರ

Update: 2019-09-09 13:54 GMT

ತಿರುವನಂತಪುರಂ, ಸೆ.9: ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಸರಕಾರಿ ಸ್ವಾಮ್ಯದ ಬಿಎಸ್‌ಎನ್ನೆಲ್ ಸಂಸ್ಥೆಯ ಖಾಯಂ ಉದ್ಯೋಗಿಗಳಿಗೆ ಸತತ ಎರಡನೇ ತಿಂಗಳು ವೇತನ ಪಾವತಿ ವಿಳಂಬವಾಗಿರುವಂತೆಯೇ, ವೆಚ್ಚ ಕಡಿಮೆಗೊಳಿಸುವ ಸಲುವಾಗಿ ಪ್ರಥಮ ಹಂತದಲ್ಲಿ ಗುತ್ತಿಗೆ ನೌಕರಿಯನ್ನು ಶೇ.30ರಷ್ಟು ಕಡಿತಗೊಳಿಸುವಂತೆ ಸಂಸ್ಥೆ ಎಲ್ಲಾ ಕಚೇರಿಗಳಿಗೂ ಸುತ್ತೋಲೆ ಕಳುಹಿಸಿದೆ.

ಕೇರಳದಲ್ಲಿ ಬಿಎಸ್ಸೆಎನ್ನೆಲ್‌ನ ಗುತ್ತಿಗೆ ನೌಕರರು 7 ತಿಂಗಳಿಂದ ಬಾಕಿಯಾಗಿರುವ ವೇತನ ಪಾವತಿಗಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಮಧ್ಯೆಯೇ ಸಂಸ್ಥೆಯು ರವಾನಿಸಿರುವ ಈ ಸುತ್ತೋಲೆ ಗುತ್ತಿಗೆ ನೌಕರರಿಗೆ ಆಘಾತ ನೀಡಿದೆ. ಆಗಸ್ಟ್ 20ರಂದು ನಡೆದ ಲೆಕ್ಕಪರಿಶೋಧನಾ ಸಭೆಯಲ್ಲಿ ಕೈಗೊಂಡ ನಿರ್ಧಾರದ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ.

ಖಾಯಂ ನೌಕರರಿಂದ ಆಗದ ಕೆಲಸಗಳನ್ನು ಮಾತ್ರ ಗುತ್ತಿಗೆ ನೌಕರರಿಂದ ನಿರ್ವಹಿಸಬೇಕು. ಅಲ್ಲದೆ ಅನಿವಾರ್ಯವಾದರೆ ಮಾತ್ರ, ವಾರಕ್ಕೆ ಮೂರು ದಿನ ಮಾತ್ರ ಗುತ್ತಿಗೆ ಕಾರ್ಮಿಕರನ್ನು ಬಳಸಿಕೊಳ್ಳಬೇಕು ಎಂದು ಸಭೆಯಲ್ಲಿ ನಿರ್ಧರಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಇದು ಪ್ರಮುಖ ಹೊರಾಂಗಣ ಕೆಲಸಗಳನ್ನು ಬೃಹತ್ ಸಂಸ್ಥೆಗಳಿಗೆ ವಹಿಸಿಕೊಡುವ ಪ್ರಯತ್ನವಾಗಿದೆ ಎಂದು ನೌಕರರ ಒಕ್ಕೂಟ ಹೇಳಿದೆ.

ಬಿಎಸ್ಸೆಎನ್ನೆಲ್ ಪುನಶ್ಚೇತನ ಪ್ಯಾಕೇಜ್‌ನಡಿ ಸ್ವಯಂ ನಿವೃತ್ತಿ ಯೋಜನೆಯನ್ನು ಪ್ರಸ್ತಾಪಿಸುವ ನಿರೀಕ್ಷೆಯಿದೆ. ಈಗ ವೇತನ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಸ್ತಾವನೆಯನ್ನು ಹಲವು ಉದ್ಯೋಗಿಗಳು ಸ್ವೀಕರಿಸಬಹುದು. ಖಾಯಂ ನೌಕರರ ಸಂಖ್ಯೆ ಕಡಿಮೆಯಾದೊಡನೆ ಹಾಗೂ ಗುತ್ತಿಗೆ ನೌಕರಿಗೆ ಸಂಬಂಧಿಸಿ ಹೊಸ ನಿಯಮವನ್ನು ಜಾರಿಗೊಳಿಸಿದ ಬಳಿಕ ಪ್ರಮುಖ ಹೊರಾಂಗಣ ಕೆಲಸಗಳನ್ನು ಬೃಹತ್ ಸಂಸ್ಥೆಗಳಿಗೆ ವಹಿಸಬಹುದು ಎಂದು ಬಿಎಸ್ಸೆಎನ್ನೆಲ್ ಸಾಂದರ್ಭಿಕ ಗುತ್ತಿಗೆ ನೌಕರರ ಒಕ್ಕೂಟ(ಸಿಸಿಎಲ್‌ಯು)ದ ಕಾರ್ಯಾಧ್ಯಕ್ಷ ಕೆ ಮೋಹನನ್ ಹೇಳಿದ್ದಾರೆ.

ಈಗ ಇರುವ ಹಲವು ಗುತ್ತಿಗೆ ನೌಕರರು ಸುಮಾರು 20ರಿಂದ 30 ವರ್ಷ ಇಲ್ಲಿ ಕೆಲಸ ಮಾಡಿದವರು. ನಿವೃತ್ತಿ ವಯಸ್ಸಿನ ಮಿತಿಯಲ್ಲಿ ಸ್ವೇಚ್ಛಾನುಸಾರ ಬದಲಾವಣೆ ಮಾಡುವ ಮೂಲಕ ಕಳೆದ ಕೆಲ ತಿಂಗಳಿನಲ್ಲಿ ಸುಮಾರು 2000 ಗುತ್ತಿಗೆ ನೌಕರರನ್ನು ಕೆಲಸ ತೊರೆಯುವಂತೆ ಸೂಚಿಸಲಾಗಿದೆ ಎಂದವರು ಹೇಳಿದ್ದಾರೆ. ಹಲವು ತಿಂಗಳಿಂದ ಬಾಕಿ ಇರುವ ವೇತನ ಪಾವತಿಗೆ ಆಗ್ರಹಿಸಿ ಎರಡು ತಿಂಗಳ ಹಿಂದೆ ಗುತ್ತಿಗೆ ನೌಕರರು ಚೀಫ್ ಜನರಲ್ ಮ್ಯಾನೇಜರ್(ಸಿಜಿಎಂ) ಕಚೇರಿಯೆದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಗುತ್ತಿಗೆ ನೌಕರರ ಬಾಕಿ ವೇತನ ಪಾವತಿಸಲು ತಕ್ಷಣ ಹಣದ ವ್ಯವಸ್ಥೆ ಮಾಡುವಂತೆ ಕೋರಿ ಸಿಜಿಎಂ ಕಾರ್ಪೊರೇಟ್ ಕಚೇರಿಗೆ ಪತ್ರ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News