ಶರಣರು-ಅಂಬೇಡ್ಕರ್ ಹೇಳಿದ ಸತ್ಯ

Update: 2019-09-09 18:23 GMT

 ಮಲಗಿದವರನ್ನು ಸುಲಭದಲ್ಲಿ ಎಚ್ಚರಿಸಬಹುದು. ಮಲಗಿದಂತೆ ನಟಿಸುವವರನ್ನು ಎಚ್ಚರಿಸುವುದು ಕಷ್ಟ ಎನ್ನುತ್ತದೆ ಲೋಕಜ್ಞಾನ. ಸನ್ಮಾನ್ಯ ಪೇಜಾವರ ಶ್ರೀಗಳು ‘ಲಿಂಗಾಯತ ಧರ್ಮವು ಪ್ರತ್ಯೇಕ ಧರ್ಮವೆಂದು ಸಾಧಿಸಲು ಯಾರಿಂದಲೂ ಸಾಧ್ಯವಿಲ್ಲ’-ಎಂದು ಬರೆದಿರುವ ಬರಹ 6-9-2019ರ ವಾರ್ತಾಭಾರತಿ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಇದನ್ನು ಓದಿದಾಗ ಮೇಲಿನ ಲೋಕಜ್ಞಾನ ನೆನಪಿಗೆ ಬಂತು.

ಈ ಲೋಕಜ್ಞಾನ ಐದು ಸಾವಿರ ವರ್ಷಗಳಿಂದಲೂ ಈ ದೇಶದಲ್ಲಿ ಕಾಲಕ್ಕೆ ತಕ್ಕಂತೆ ಹೊಸಹೊಸ ಪರಿಭಾಷೆಗಳನ್ನು ಬಳಸುತ್ತಾ ಶ್ರಮಿಕರನ್ನು ವಂಚಿಸುತ್ತಾ ಬಂದಿರುವ ವೈದಿಕ ಕುಟಿಲ ನೀತಿಗಳನ್ನು ನೆನೆದಾಗಲೆಲ್ಲ ನೆನಪಾಗುವ ಅರಿವಿನ ಎಚ್ಚರದ ಅನುಭವ ಜ್ಞಾನ. ಈ ದೇಶಕ್ಕಂಟಿದ ಶಾಪಗ್ರಸ್ಥ ಸ್ಥಿತಿಯ ಜಾತಿವ್ಯವಸ್ಥೆಗೆ ಮೂಲ ಕಾರಣವಾಗಿರುವ ವೈದಿಕ ಚಾತುರ್ವರ್ಣ ನೀತಿಯ ಧರ್ಮವ್ಯವಸ್ಥೆ-ಉದಾರತೆ ಸಹಿಷ್ಣುತೆ, ಸಹಜೀವನ, ಸಮಾನತೆ, ಸೌಹಾರ್ದ, ಒಳಗೊಳ್ಳುವಿಕೆ, ಸಂಘಟನಾಗುಣ, ಸಹನೌಭುನಕ್ತು-ಇಂತಹ ವಾಸ್ತವವಲ್ಲದ ಪರಿಭಾಷೆಗಳನ್ನು ಬಳಸುತ್ತಾ ಮೂಗಿನ ತುದಿಗೆ ತುಪ್ಪ ಸವರುವ ಮಾತನಾಡಿದೆ. ಅದಕ್ಕೆ ಭ್ರಮಿತರಾದವರನ್ನು ಕಾಲಾಳಾಗಿಸಿಕೊಂಡು ಒಡೆದಾಳುವ ಒಳತಂತ್ರವನ್ನು ಹುನ್ನಾರದಲ್ಲಿ ಬಳಸುತ್ತಾ ತನ್ನ ಬೇಳೆ ಬೇಯಿಸಿಕೊಂಡಿದೆ. ಇದೇ ಪರಿಭಾಷೆ, ಇದೇ ಆಲೋಚನೆ ಇಂದು ಮಾನ್ಯ ಪೇಜಾವರ ಶ್ರೀಗಳ ಲೇಖನದ ಹೂರಣವಾಗಿದೆ.

ನೀವು ನಿಮ್ಮ ನಿಮ್ಮ ಜಾಗಗಳಲ್ಲಿಯೇ ಇರಿ, ನಾವು ನಮ್ಮ ಗರ್ಭಗುಡಿಯಲ್ಲಿಯೇ ಇರುತ್ತೇವೆ. ನಾವು ಇದೇ ರೀತಿ ಬದುಕುತ್ತೇವೆ. ನೀವು ಅದೇ ರೀತಿ ಬದುಕಿ, ನಾವಿರುವುದು ಸೇವೆ ಸ್ವೀಕರಿಸುವುದಕ್ಕೆ, ನೀವಿರುವುದು ಸೇವೆ ಸಲ್ಲಿಸುವುದಕ್ಕೆ -ಇದೇ ಹಿಂದೂ ಧರ್ಮ, ಇದೇ ಹಿಂದುತ್ವದ ಮರ್ಮ. ಆಗಾಗ ವಿರೋಧಿಸುವ ನೀವೂ ನಮ್ಮ ಅಣ್ಣತಮ್ಮಂದಿರೇ ಬೇರೆ ಹೋಗಬೇಡಿ ಬನ್ನಿ ಎನ್ನುತ್ತೇವೆ. ಬನ್ನಿ, ಆದರೆ ನೀವು ಎಲ್ಲಿದ್ದೀರೋ ಅಲ್ಲೇ ಇದ್ದು ನಮ್ಮಿಂದಿಗಿರಿ. ಇದು ಇವರ ಉದಾರತ್ವ; ಇದು ಹಿಂದುತ್ವ.

ಸನ್ಮಾನ್ಯ ಪೇಜಾವರ ಶ್ರೀಯವರೇ, ವೈದಿಕ ವಟುಗಳಿಗಿಂತಲೂ ಸಂಸ್ಕೃತ ಜ್ಞಾನದಲ್ಲಿ ಹೆಚ್ಚು ಪರಿಣಿತಿ ಇರುವ ಯಾರಾದರೂ ಒಬ್ಬ ‘ಹಿಂದೂ ಶೂದ್ರನನ್ನು’ ‘ಹಿಂದೂ ಅಸ್ಪಶ್ಯನನ್ನು’ ನಿಮ್ಮ ಉಡುಪಿಯ ಶ್ರೀಮಠದ ಗುರುಪೀಠಕ್ಕೆ ಸ್ವಾಮೀಜಿಯಾಗಿ ನೇಮಿಸಿ, ನೀವು ಹೇಳುವ ಸಮಾನತೆಯನ್ನು ವಾಸ್ತವವಾಗಿ ತೋರಿಸಿ. ಅಷ್ಟೂ ಆಗದಿದ್ದರೆ ಮೊದಲ ಹಂತವಾಗಿ ಇಂದಿನಿಂದ, ಈ ಕ್ಷಣದಿಂದ ತಮ್ಮ ಶ್ರೀಮಠದಲ್ಲಿ ಸಮಾನ ಸಹಪಂಕ್ತಿ ಭೋಜನದ ಸಹನೌಭುನಕ್ತುವನ್ನು ಜಾರಿಗೆ ತನಿ.್ನ ಇಷ್ಟಾದರೂ ಮಾಡಿದರೆ ತಮ್ಮ ಈ ಲೇಖನದ ಅಂತರಂಗ ಬಹಿರಂಗದ ಆತ್ಮಸಂಗಕ್ಕೆ, ಪಾರದರ್ಶಕ ಬೆಳಗಿಗೆ ಜಗತ್ತು ತಲೆ ಬಾಗುತ್ತದೆ. ನಂಬಿಕೆ ಬೆಳೆಯುತ್ತದೆ.

ಉಪಸಂಹಾರ: 1) ರಾಜಮಹಾರಾಜರ ಆಸ್ಥಾನದಲ್ಲಿದ್ದು ಭಾಷೆಯನ್ನು ವಂಚನೆಯ ಸರಕಾಗಿ ಬಳಸುತ್ತಿದ್ದ ಉಪಜೀವಿಗಳನ್ನು ಹನ್ನೆರಡನೇ ಶತಮಾನದ ಶರಣರು ‘ಭಾಷೆಗೂಳಿನ ಭಟರು’ ಎಂದು ಕರೆದಿದ್ದಾರೆ.

2) ಅಂಬೇಡ್ಕರ್ ಅವರು ಹೇಳುತ್ತಾರೆ-ನೀವು ನಮ್ಮ ಯಜಮಾನರಾಗಲಿಕ್ಕೆ ಆಸಕ್ತಿ ಇರಬಹುದು. ಆದರೆ ನಮಗೆ ನಿಮ್ಮ ಗುಲಾಮರಾಗುವುದಕ್ಕೆ ಆಸಕ್ತಿ ಇಲ್ಲ.

-ಪ್ರೊ. ಎಸ್. ಜಿ. ಸಿದ್ದರಾಮಯ್ಯ
-ಪ್ರೊ. ಚಂದ್ರಶೇಖರ ತಾಳ್ಯ
-ಡಾ. ಬಸವರಾಜ ಸಾದರ
-ಡಾ. ಎಸ್. ಚಂದ್ರಶೇಖರ್
-ಚಂದ್ರಶೇಖರ ಪಾಟೀಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News