1984ರ ಸಿಕ್ಖ್ ವಿರೋಧಿ ದಂಗೆ ಪ್ರಕರಣಕ್ಕೆ ಮರುಜೀವ: ಮಧ್ಯಪ್ರದೇಶ ಸಿಎಂಗೆ ಕಂಟಕ

Update: 2019-09-10 03:48 GMT

ಹೊಸದಿಲ್ಲಿ, ಸೆ.10: ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‌ನಾಥ್ ವಿರುದ್ಧ 1984ರ ಸಿಕ್ಖ್ ವಿರೋಧಿ ದಂಗೆಗೆ ಸಂಬಂಧಿಸಿದ ಏಳು ಪ್ರಕರಣಗಳನ್ನು ಗೃಹ ಸಚಿವಾಲಯ ಮರು ತೆರೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಗಳು, ಗುಂಪುಗಳು ಹಾಗೂ ಸಂಘ ಸಂಸ್ಥೆಗಳು ಯಾವುದೇ ಮಾಹಿತಿ ಇದ್ದಲ್ಲಿ ಹಂಚಿಕೊಳ್ಳಬಹುದು ಎಂದು ಪ್ರಕಟಿಸಿದೆ.

ಎಫ್‌ಐಆರ್ ಸಂಖ್ಯೆ 601/84 ಸೇರಿದಂತೆ ಸಿಕ್ಖ್ ವಿರೋಧಿ ದಂಗೆಗೆ ಸಂಬಂಧಿಸಿದ ಏಳು ಪ್ರಕರಣಗಳನ್ನು ಮರು ತೆರೆಯಲಾಗಿದೆ. ಗಲಭೆ ಸಂದರ್ಭದಲ್ಲಿ ರಕಬ್‌ಗಂಜ್ ಗುರುದ್ವಾರಕ್ಕೆ ಮುತ್ತಿಗೆ ಹಾಕಿದ ಗುಂಪಿನಲ್ಲಿ ಕಮಲ್‌ನಾಥ್ ಅವರೂ ಇದ್ದರು ಎಂಬ ಸಾಕ್ಷಿಯೊಬ್ಬನ ಪ್ರತಿಪಾದನೆಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಅಂದಿನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಹತ್ಯೆಯಾದ ಬಳಿಕ ಸಿಕ್ಖ್ ವಿರೋಧಿ ಗಲಭೆ ಆರಂಭವಾಗಿತ್ತು.

ಅಂದು ಅಪರಾಧ ವರದಿಗಾರನಾಗಿದ್ದ ಸಂಜಯ್ ಸೂರಿಯಂಥ ಕೆಲ ಸಾಕ್ಷಿಗಳು, ಈ ಗುಂಪಿನಲ್ಲಿ ಕಮಲ್‌ನಾಥ್ ಇದ್ದರು ಎಂದು ಹೇಳಿಕೆ ನೀಡಿದ್ದರು. ಆದರೆ ಹಿರಿಯ ಕಾಂಗ್ರೆಸ್ ಮುಖಂಡ ಇದನ್ನು ನಿರಾಕರಿಸಿದ್ದಾರೆ. ಈ ಪ್ರಕರಣದ ಎಫ್‌ಐಆರ್‌ನಲ್ಲಿ ಕಮಲ್‌ನಾಥ್ ಹೆಸರಿಲ್ಲ.

ಏಳು ಪ್ರಕರಣಗಳ ಪೈಕಿ ಒಂದು ಪ್ರಕರಣದಲ್ಲಿ ಶಾಮೀಲಾಗಿದ್ದ ಐದು ಆರೋಪಿಗಳಿಗೆ ಕಮಲ್‌ನಾಥ್ ಆಶ್ರಯ ನೀಡಿದ್ದರು ಎಂದು ಸೋಮವಾರ ದಿಲ್ಲಿ ಶಾಸಕ ಮಜೀಂದರ್ ಸಿಂಗ್ ಸಿಸ್ರಾ ಹೇಳಿಕೆ ನೀಡಿದ್ದರು.

"ಹೊಸದಿಲ್ಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್‌ನಲ್ಲಿ ನಾಥ್ ಅವರ ಹೆಸರು ಇಲ್ಲ. 601/84 ಪ್ರಕರಣದಲ್ಲಿ ಐದು ಮಂದಿಯ ವಿರುದ್ಧ ಆರೋಪ ಹೊರಿಸಲಾಗಿದ್ದು, ಇವರಿಗೆ ನಾಥ್ ಮನೆಯಲ್ಲಿ ಆಸರೆ ನೀಡಲಾಗಿದೆ. ಸಾಕ್ಷಿ ಇಲ್ಲ ಎಂಬ ಕಾರಣಕ್ಕೆ ಎಲ್ಲರನ್ನೂ ಆರೋಪಮುಕ್ತಗೊಳಿಸಲಾಗಿದೆ. ಇದೀಗ ಎಸ್‌ಐಟಿ ಈ ಪ್ರಕರಣದ ಮರುತನಿಖೆಗೆ ಮಾಡುತ್ತಿರುವುದರಿಂದ ಕಮಲ್‌ನಾಥ್ ದಂಗೆಯಲ್ಲಿ ಶಾಮೀಲಾದ ಬಗ್ಗೆ ಇಬ್ಬರು ಸಾಕ್ಷಿಗಳು ಎಸ್‌ಐಟಿ ಮುಂದೆ ಹಾಜರಾಗಿ ಹೇಳಿಕೆ ನೀಡಲಿದ್ದಾರೆ" ಎಂದು ಸಿಸ್ರಾ ಹೇಳಿದ್ದಾರೆ.

ಇಂಗ್ಲೆಂಡಿನಲ್ಲಿರುವ ಸಂಜಯ್ ಸೂರಿ ಹಾಗೂ ಪಾಟ್ನಾದಲ್ಲಿರುವ ಮುಕ್ತಿಯಾರ್ ಸಿಂಗ್ ಎಂಬ ಇಬ್ಬರು ಸಾಕ್ಷಿಗಳ ಜತೆ ಈಗಾಗಲೇ ಮಾತನಾಡಿದ್ದು, ಅವರು ಎಸ್‌ಐಟಿ ಮುಂದೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಲಿದ್ದಾರೆ ಎಂದು ಸಿಸ್ರಾ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News