​ಗ್ರಾಮೀಣಸೇವೆ ಮಾಡುವವರಿಗೆ ಈ ರಾಜ್ಯದ ವೈದ್ಯಕೀಯ ಶಿಕ್ಷಣದಲ್ಲಿ ಮೀಸಲಾತಿ

Update: 2019-09-10 04:06 GMT

ಮುಂಬೈ, ಸೆ.10: ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರು ಹಾಗೂ ರೋಗಿಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಪ್ರಯತ್ನವಾಗಿ, ವೈದ್ಯಕೀಯ ಶಿಕ್ಷಣ ಪೂರ್ಣಗೊಂಡ ಬಳಿಕ ಐದು ವರ್ಷ ಕಾಲ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಮಾಡುವವರಿಗೆ ಎಂಬಿಬಿಎಸ್ ಸೀಟುಗಳಲ್ಲಿ ಶೇಕಡ 10ರಷ್ಟು ಮೀಸಲಾತಿ ನೀಡುವ ವಿನೂತನ ಯೋಜನೆಯನ್ನು ಮಹಾರಾಷ್ಟ್ರ ರಾಜ್ಯ ಸರ್ಕಾರ ಪ್ರಕಟಿಸಿದೆ.

ಅಂತೆಯೇ ಏಳು ವರ್ಷ ಕಾಲ ಗ್ರಾಮೀಣ ಸೇವೆ ಮಾಡುವ ವೈದ್ಯರಿಗೆ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಲ್ಲಿ ಶೇಕಡ 20ರಷ್ಟು ಮೀಸಲಾತಿ ನೀಡಲು ಮುಂದಾಗಿದೆ.

ವೈದ್ಯಕೀಯ ಶಿಕ್ಷಣ ಮುಗಿಸಿದ ಬಳಿಕ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸಲು ನಿರಾಕರಿಸಿದರೆ, ಐದು ವರ್ಷ ಜೈಲು ಹಾಗೂ ಅವರ ಪದವಿಗಳ ರದ್ದತಿಯಂಥ ಕಟ್ಟುನಿಟ್ಟಿನ ಷರತ್ತುಗಳನ್ನು ಕೂಡಾ ಈ ಕೋಟಾದಡಿ ಸೌಲಭ್ಯ ಪಡೆಯುವ ವಿದ್ಯಾರ್ಥಿಗಳಿಗೆ ವಿಧಿಸಲಾಗುತ್ತಿದೆ.

ಈ ಕುರಿತ ಪ್ರಸ್ತಾವಕ್ಕೆ ರಾಜ್ಯ ಸಚಿವ ಸಂಪುಟ ಸೋಮವಾರ ಅನುಮೋದನೆ ನೀಡಿದ್ದು, ಈ ಸಂಬಂಧ ತಕ್ಷಣವೇ ಮಸೂದೆ ಮಂಡಿಸಿ ಸೂಕ್ತ ಕಾನೂನು ರೂಪಿಸಲು ಮುಂದಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಈ ಕಾನೂನು ಜಾರಿಗೆ ಬರಲಿದ್ದು, ಎಲ್ಲ ರಾಜ್ಯ ಸರ್ಕಾರಿ ಹಾಗೂ ಪೌರಾಡಳಿತ ಸಂಸ್ಥೆಯ ಅಧೀನದ ವೈದ್ಯಕೀಯ ಕಾಲೇಜುಗಳಲ್ಲಿ ಈ ಸೌಲಭ್ಯ ದೊರಕಲಿದೆ.

ದೀರ್ಘಕಾಲ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಕೆಲಸ ಮಾಡುವ ಇಚ್ಛೆ ಹೊಂದಿದ ವಿದ್ಯಾರ್ಥಿಗಳಿಗೆ ಇದರಿಂದ ಲಾಭವಾಗಲಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ 450-500 ಎಂಬಿಬಿಎಸ್ ಸೀಟುಗಳನ್ನು ಈ ಕೋಟಾದಡಿ ನೀಡಲಾಗುತ್ತದೆ. ಅಂತೆಯೇ ಎಂಬಿಬಿಎಸ್ ಪದವಿ ಪಡೆದು ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ಸ್ನಾತಕೋತ್ತರ ಪದವಿಗಾಗಿ 300 ಸೀಟುಗಳು ಈ ಕೋಟಾದಡಿ ಲಭ್ಯವಾಗಲಿವೆ.

ಇದರಿಂದಾಗಿ ಗ್ರಾಮೀಣ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಆರೋಗ್ಯ ಸೇವೆ ಸುಧಾರಿಸಲು ಸಾಧ್ಯವಾಗಲಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ನಿರ್ದೇಶನಾಲಯದ ಮುಖ್ಯಸ್ಥ ಡಾ.ಟಿ.ಪಿ.ಲಹಾನೆ ಹೇಳಿದ್ದಾರೆ. ಇಂಥದ್ದೇ ವ್ಯವಸ್ಥೆ ಈಗಾಗಲೇ ಪುಣೆಯಲ್ಲಿರುವ ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜಿನಲ್ಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News