ಯುವಜನತೆ ಉಬರ್, ಓಲಾಗಳಿಗೆ ಆದ್ಯತೆ ನೀಡುತ್ತಿರುವುದೇ ಆಟೊಮೊಬೈಲ್ ಕ್ಷೇತ್ರದ ಬಿಕ್ಕಟ್ಟಿಗೆ ಕಾರಣ

Update: 2019-09-10 15:57 GMT
ಚೆನ್ನೈ, ಸೆ.10: ಹೊಸ ಕಾರು ಖರೀದಿಸಿ ಇಎಂಐ(ಮಾಸಿಕ ಕಂತು) ಮೂಲಕ ಹಣ ಪಾವತಿಸುವ ಬದಲು ಓಲಾ, ಉಬರ್ ಕಾರುಗಳಲ್ಲಿ ಪ್ರಯಾಣಿಸಲು ಯುವಜನತೆ ಆದ್ಯತೆ ನೀಡುತ್ತಿರುವುದು ಆಟೊಮೊಬೈಲ್ ಕ್ಷೇತ್ರದ ಈಗಿನ ಬಿಕ್ಕಟ್ಟಿಗೆ ಪ್ರಧಾನ ಕಾರಣವಾಗಿದೆ ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಲಕ್ಷಾಂತರ ಉದ್ಯೋಗ ನಷ್ಟವಾಗಿರುವ ಆಟೊಮೊಬೈಲ್ ಕ್ಷೇತ್ರ ಎದುರಿಸುತ್ತಿರುವ ಬಿಕ್ಕಟ್ಟು ಪರಿಹರಿಸಲು ಕೇಂದ್ರ ಸರಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಆಟೊಮೊಬೈಲ್ ಕ್ಷೇತ್ರ ಎದುರಿಸುತ್ತಿರುವ ಬಿಕ್ಕಟ್ಟಿಗೆ ಹಲವು ಕಾರಣಗಳಿವೆ. ಬಿಎಸ್6(ಭಾರತ್ ಸ್ಟೇಜ್ 6) ಅಭಿಯಾನ, ನೋಂದಣಿ ಶುಲ್ಕದ ವಿಷಯ ಮುಂತಾದವುಗಳಿಂದ ಯುವಜನತೆ ಹೊಸ ಕಾರು ಕೊಳ್ಳುವುದರಿಂದ ವಿಮುಖರಾಗುತ್ತಿದ್ದಾರೆ. ಈಗ ಅವರು ಮೆಟ್ರೋ ರೈಲು ಅಥವಾ ಉಬರ್, ಓಲಾ ಮುಂತಾದ ವಾಹನ ಸೇವೆಗೆ ಆದ್ಯತೆ ನೀಡುತ್ತಿದ್ದಾರೆ ಎಂದವರು ಹೇಳಿದ್ದಾರೆ. ಆಟೊಮೊಬೈಲ್ ಹಾಗೂ ಇತರ ಕ್ಷೇತ್ರದ ಬಿಕ್ಕಟ್ಟು ನಿವಾರಣೆಗೆ ಸರಕಾರ ದೇಶಾದ್ಯಂತ ಆರ್ಥಿಕ ಮತ್ತು ಇತರ ವಿವಿಧ ಕ್ಷೇತ್ರದ ತಜ್ಞರೊಂದಿಗೆ ನಿರಂತರ ಸಂವಾದ ನಡೆಸುತ್ತಿದೆ ಎಂದು ನಿರ್ಮಲಾ ಹೇಳಿದ್ದಾರೆ. ಮೋದಿ ಸರಕಾರದ ದ್ವಿತೀಯ ಅವಧಿಯ 100 ದಿನದಲ್ಲಿ ಮಾಡಿರುವ ಸಾಧನೆಯ ಬಗ್ಗೆ ಅವರು ವಿವರಿಸುತ್ತಿದ್ದರು. ಸಚಿವೆಯ ಹೇಳಿಕೆಯನ್ನು ಟೀಕಿಸಿರುವ ಕಾಂಗ್ರೆಸ್ ಪಕ್ಷ, ಹಾಗಿದ್ದರೆ ಬಸ್ಸು ಮತ್ತು ಲಾರಿಗಳ ಮಾರಾಟ ಕುಸಿಯಲೂ ಯುವಜನತೆಯ ನಿಲುವು ಬದಲಾಗಿರುವುದು ಕಾರಣವೇ ಎಂದು ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News