ಬ್ರಾಹ್ಮಣರು ಹುಟ್ಟಿನಿಂದ ಶ್ರೇಷ್ಟರು: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿವಾದಾತ್ಮಕ ಹೇಳಿಕೆ

Update: 2019-09-10 14:52 GMT

ಹೊಸದಿಲ್ಲಿ, ಸೆ. 10: ಸಮರ್ಪಣೆ, ತ್ಯಾಗ ಹಾಗೂ ಇತರ ಸಮುದಾಯಗಳಿಗೆ ಮಾರ್ಗದರ್ಶನ ನೀಡುವ ಕಾರಣಕ್ಕೆ ಬ್ರಾಹ್ಮಣರನ್ನು ಹುಟ್ಟಿನಿಂದಲೇ ಗೌರವಿಸಲಾಗುತ್ತದೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ. ಕೋಟಾದಲ್ಲಿ ರವಿವಾರ ನಡೆದ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಭಾದ ಸಮಾವೇಶದಲ್ಲಿ ಮಾತನಾಡಿದ ಬಿರ್ಲಾ, ಬ್ರಾಹ್ಮಣ ಸಮುದಾಯ ಇತರ ಎಲ್ಲ ಸಮುದಾಯಗಳಿಗೆ ಮಾರ್ಗದರ್ಶನ ನೀಡುತ್ತಿದೆ. ಸಮುದಾಯ ಯಾವಾಗಲೂ ಈ ರಾಷ್ಟ್ರದಲ್ಲಿ ಮಾರ್ಗದರ್ಶಕ ಪಾತ್ರವನ್ನು ನಿರ್ವಹಿಸುತ್ತಿದೆ. ಸಮಾಜದಲ್ಲಿ ಶಿಕ್ಷಣ ಹಾಗೂ ಮೌಲ್ಯಗಳನ್ನು ಪಸರಿಸುವಲ್ಲಿ ಕೂಡ ಪ್ರಮುಖ ಪಾತ್ರ ವಹಿಸುತ್ತಿದೆ. ಇಂದು ಕೂಡ ಒಂದು ಬ್ರಾಹ್ಮಣ ಕುಟುಂಬ ಹಳ್ಳಿ ಅಥವಾ ಗುಡಿಸಲಿನಲ್ಲಿ ವಾಸಿಸುತ್ತಿದ್ದರೆ, ಆ ಬ್ರಾಹ್ಮಣ ಕುಟುಂಬ ಯಾವಾಗಲೂ ಸಮರ್ಪಣೆ ಹಾಗೂ ಸೇವೆಯಿಂದ ಉನ್ನತ ಸ್ಥಾನ ಹೊಂದಿರುತ್ತದೆ. ಆದುದರಿಂದ ಬ್ರಾಹ್ಮಣರನ್ನು ಅವರ ಹುಟ್ಟಿನ ಕಾರಣಕ್ಕೆ ಸಮಾಜದಲ್ಲಿ ಹೆಚ್ಚು ಗೌರವಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಸಮುದಾಯದ ಬಗೆಗಿನ ತನ್ನ ಪ್ರಶಂಸೆಯನ್ನು ಬಿರ್ಲಾ ರವಿವಾರ ಟ್ವೀಟ್ ಕೂಡಾ ಮಾಡಿದ್ದಾರೆ ಹಾಗೂ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಸಮರ್ಪಣೆ ಹಾಗೂ ತ್ಯಾಗದ ಕಾರಣಕ್ಕೆ ಬ್ರಾಹ್ಮಣರು ಸಮಾಜದಲ್ಲಿ ಉನ್ನತ ಸ್ಥಾನ ಪಡೆದುಕೊಂಡಿದ್ದಾರೆ. ಬ್ರಾಹ್ಮಣ ಸಮುದಾಯ ಮಾರ್ಗದರ್ಶಕನ ಪಾತ್ರ ನಿರ್ವಹಿಸಲು ಇದು ಕಾರಣ ಎಂದು ಅವರು ಟ್ವೀಟ್ನಲ್ಲಿ ಹೇಳಿದ್ದಾರೆ. ಅವರ ಟ್ವಿಟ್ಟರ್ ಹೇಳಿಕೆಯನ್ನು ಟ್ವಿಟ್ಟರ್ನ ಹಲವು ಬಳಕೆದಾರರು ಖಂಡಿಸಿದ್ದಾರೆ. ಅವರು ಲೋಕಸಭಾ ಸ್ಪೀಕರ್ ಸ್ಥಾನಕ್ಕೆ ಗೌರವ ನೀಡಬೇಕು ಎಂದು ಕೆಲವರು ಹೇಳಿದ್ದಾರೆ. ಪಿಯುಸಿಎಲ್ನ ರಾಜಸ್ಥಾನದ ಅಧ್ಯಕ್ಷೆ ಕವಿತಾ ಶ್ರೀವಾತ್ಸವ ಅವರು ಬಿರ್ಲಾ ಅವರ ಹೇಳಿಕೆ ಖಂಡಿಸಿದ್ದಾರೆ. ಅಲ್ಲದೆ, ಬಿರ್ಲಾ ಅವರು ತಮ್ಮ ಹೇಳಿಕೆ ಹಿಂದೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಸಮುದಾಯಗಳ ಮೇಲೆ ಪ್ರಾಬಲ್ಯ ಸ್ಥಾಪಿಸುವುದು ಅಥವಾ ಒಂದು ಸಮುದಾಯ ಇತರ ಸಮುದಾಯಕ್ಕಿಂತ ಶ್ರೇಷ್ಠ ಎಂದು ಘೋಷಿಸುವುದು ಸಂವಿಧಾನದ ವಿಧಿ 14ಕ್ಕೆ ವಿರುದ್ಧವಾದುದು ಎಂದು ಅವರು ಹೇಳಿದ್ದಾರೆ. ಇದು ಇತರ ಜಾತಿಗಳ ಕೀಳರಿಮೆಗೆ ದಾರಿ ಮಾಡಿಕೊಡುತ್ತದೆ ಹಾಗೂ ಜಾತಿವಾದವನ್ನು ಉತ್ತೇಜಿಸುತ್ತದೆ. ಪಿಯುಸಿಎಲ್ ಅವರ ವಿರುದ್ಧ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ದೂರು ನೀಡಲಿದೆ ಎಂದು ಶ್ರೀವಾತ್ಸವ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News