ಅತ್ಯಾಚಾರ ಪ್ರಕರಣದ ಸಂತ್ರಸ್ತರಿಗೆ ಮಧ್ಯಂತರ ಪರಿಹಾರ: ಆದಿತ್ಯನಾಥ್

Update: 2019-09-10 17:02 GMT

ಲಕ್ನೊ, ಸೆ.10: ಅತ್ಯಾಚಾರ, ಗುಂಪು ಹಲ್ಲೆ ಮತ್ತು ಹತ್ಯೆ ಮತ್ತಿತರ ಅಪರಾಧ ಪ್ರಕರಣದ ಸಂತ್ರಸ್ತರಿಗೆ ಮಧ್ಯಂತರ ಪರಿಹಾರ ಒದಗಿಸಲು ಉತ್ತರಪ್ರದೇಶದ ಸರಕಾರ ನಿರ್ಧರಿಸಿದೆ. ರಾಜ್ಯದ ಮುಖ್ಯಮಂತ್ರಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ. ವಿಚಾರಣಾ ಹಂತದಲ್ಲಿರುವ ಅಪರಾಧ ಪ್ರಕರಣಗಳಲ್ಲಿ , ಜಿಲ್ಲಾ ನ್ಯಾಯಾಧೀಶರ ವರದಿಯ ಆಧಾರದಲ್ಲಿ ಸಂತ್ರಸ್ತರಿಗೆ ಪರಿಹಾರ ಮೊತ್ತದ ಶೇ.25ರಷ್ಟು ಮೊತ್ತವನ್ನು ಮಧ್ಯಂತರ ಪರಿಹಾರವಾಗಿ ಒದಗಿಸಲಾಗುವುದು ಎಂದು ಸರಕಾರದ ವಕ್ತಾರ ಸಿದ್ದಾರ್ಥ್ ನಾಥ್ ಸಿಂಗ್ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದ್ದಾರೆ. ಇದುವರೆಗೆ ಪ್ರಕರಣ ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಸಂತ್ರಸ್ತರಿಗೆ ಪರಿಹಾರ ದೊರಕುತ್ತಿತ್ತು. ಈ ಪ್ರಕ್ರಿಯೆಯಲ್ಲಿ ಆಗುವ ವಿಳಂಬವನ್ನು ಗಮನಿಸಿ ಮಧ್ಯಂತರ ಪರಿಹಾರ ನೀಡಲು ನಿರ್ಧರಿಸಲಾಗಿದೆ. ತೆಹ್ಸೀನ್ ಪೂನಾವಾಲಾ ಮತ್ತು ಭಾರತ ಸರಕಾರದ ಪ್ರಕರಣದಲ್ಲಿ 2018ರ ಜುಲೈ 17ರಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಅನುಸಾರ ಮಧ್ಯಂತರ ಪರಿಹಾರ ನೀಡಲಾಗುವುದು ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News