ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿಯ ಪರಿಕಲ್ಪನೆಗೆ ಕೃಷಿ ವಿಜ್ಞಾನಿಗಳ ತಿರಸ್ಕಾರ

Update: 2019-09-10 17:02 GMT

ಹೊಸದಿಲ್ಲಿ,ಸೆ.10: ದೇಶದ ಕೃಷಿ ವಿಜ್ಞಾನಿಗಳ ಅತ್ಯುನ್ನತ ಸಂಸ್ಥೆಯಾಗಿರುವ ನ್ಯಾಚುರಲ್ ಅಕಾಡೆಮಿ ಆಫ್ ಅಗ್ರಿಕಲ್ಚರಲ್ ಸೈನ್ಸಸ್ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಯ ಪರಿಕಲ್ಪನೆಯನ್ನು ಟೀಕಿಸಿದೆ. ಅದು ದೃಢಪಡದ ತಂತ್ರಜ್ಞಾನವಾಗಿದ್ದು,ರೈತರಿಗೆ ಅಥವಾ ಬಳಕೆದಾರರಿಗೆ ಹೇಳಿಕೊಳ್ಳುವಂತಹ ಲಾಭವನ್ನು ನೀಡುವುದಿಲ್ಲ ಎಂದು ಅದು ಹೇಳಿದೆ.

 ದ್ಯುತಿಸಂಶ್ಲೇಷಣೆಗಾಗಿ ಬೆಳೆಗಳಿಗೆ ಅಗತ್ಯವಿರುವ ಶೇ.98ರಷ್ಟು ಪೋಷಕಾಂಶಗಳು ವಾಯು ಮತ್ತು ನೀರಿನ ಮೂಲಕ ದೊರೆಯುತ್ತವೆ ಮತ್ತು ಉಳಿದ ಶೇ.2ರಷ್ಟು ಪೋಷಕಾಂಶಗಳು ಮಣ್ಣಿನಲ್ಲಿಯ ಸೂಕ್ಷ್ಮಜೀವಿಗಳ ಚಟುವಟಿಕೆಯಿಂದ ಪಡೆಯಲಾಗುತ್ತದೆ ಎಂಬ ಪರಿಕಲ್ಪನೆಯನ್ನು ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಯು ನೆಚ್ಚಿಕೊಂಡಿದೆ.

ಕೃಷಿ ಆದಾಯವನ್ನು ಹೆಚ್ಚಿಸಲು ಭಾರತವು ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಯ ಮೇಲೆ ಗಮನವನ್ನು ಕೇಂದ್ರೀಕರಿಸುತ್ತಿದೆ ಎಂದು ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನೊಯ್ಡಿದಲ್ಲಿ ವಿಶ್ವಸಂಸ್ಥೆಯ ಕಾರ್ಯಕ್ರಮದಲ್ಲಿ ಹೇಳಿರುವ ಸಂದರ್ಭದಲ್ಲೇ ಅಕಾಡೆಮಿಯ ಟೀಕೆ ಹೊರಬಿದ್ದಿದೆ. ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರೂ ಜುಲೈನಲ್ಲಿ ಕೇಂದ್ರ ಮುಂಗಡಪತ್ರ ಮಂಡನೆ ವೇಳೆ ಈ ಕೃಷಿ ಪದ್ಧತಿಯ ಮಹತ್ವವನ್ನು ಪ್ರಮುಖವಾಗಿ ಬಿಂಬಿಸಿದ್ದರು.

ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಯನ್ನು ಉತ್ತೇಜಿಸಲು ಸರಕಾರವು ಅನಗತ್ಯವಾಗಿ ಬಂಡವಾಳ ಮತ್ತು ಮಾನವ ಸಂಪನ್ಮೂಲಗಳ ಹೂಡಿಕೆಯನ್ನು ಮಾಡಬಾರದು ಎಂದು ಹೇಳಿರುವ ಅಕಾಡೆಮಿಯ ಅಧ್ಯಕ್ಷ ಪಂಜಾಬ ಸಿಂಗ್ ಅವರು,ನಾವು ಪ್ರಧಾನಿಯವರಿಗೆ ನಮ್ಮ ಶಿಫಾರಸುಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಿದ್ದು,ಅವು ವೈಜ್ಞಾನಿಕ ಸಮುದಾಯದ ಅಭಿಪ್ರಾಯವನ್ನು ಧ್ವನಿಸುತ್ತವೆ ಎಂದರು.

ಅಕಾಡೆಮಿಯು ಕಳೆದ ತಿಂಗಳು ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಯ ಕುರಿತು ಚಿಂತನ ಮಂಥನ ಅಧಿವೇಶನವನ್ನು ಆಯೋಜಿಸಿತ್ತು. ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಮಹಾ ನಿರ್ದೇಶಕ ತ್ರಿಲೋಚನ ಮಹಾಪಾತ್ರ ಮತ್ತು ನೀತಿ ಆಯೋಗದ ಸದಸ್ಯ ರಮೇಶ ಚಂದ್ ಅವರು ಅಧಿವೇಶನದಲ್ಲಿ ಪಾಲ್ಗೊಂಡಿದ್ದರು. ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಯ ಪ್ರತಿಪಾದಕ ಸುಭಾಷ ಪಾಳೇಕರ್ ಅವರು ಭಾಗಿಯಾಗಿರಲಿಲ್ಲ ಎಂದು ಅಕಾಡೆಮಿಯು ತಿಳಿಸಿದೆ.

ಆದರೆ,ಅಕಾಡೆಮಿಯು ತನ್ನ ಕೃಷಿ ಪದ್ಧತಿಯ ವೌಲ್ಯಮಾಪನ ಮಾಡುವಷ್ಟು ನೈಪುಣ್ಯತೆಯನ್ನು ಹೊಂದಿಲ್ಲ. ಈ ಪದ್ಧತಿಯನ್ನು ಭಾರತೀಯ,ಹೈಬ್ರಿಡ್ ಮತ್ತು ಕುಲಾಂತರಿ ಬೆಳೆಗಳ ಕೃಷಿಗಾಗಿ ಬಳಸಬಹುದು ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಪಾಳೇಕರ್ ತಿಳಿಸಿದರು.

ಅಕಾಡೆಮಿಯು ತನ್ನೊಂದಿಗಾಗಲೀ ಈ ಕೃಷಿಪದ್ಧತಿಯನ್ನು ಅನುಸರಿಸುತ್ತಿರುವ ರೈತರೊಂದಿಗಾಗಲೀ ಮಾತನಾಡಿಲ್ಲ. ತನ್ನನ್ನು ಆಹ್ವಾನಿಸುವ ಮುನ್ನ ಅವರು ತನ್ನ ಸಮಯಾವಕಾಶವನ್ನು ಗಣನೆಗೆ ತೆಗೆದುಕೊಳ್ಳಬೇಕಿತ್ತು. ರೈತರು ಕಾರ್ಯಾಗಾರಗಳನ್ನು ಹಮ್ಮಿಕೊಂಡಿರುತ್ತಾರೆ ಮತ್ತು ಕೇವಲ ಈ ಸಭೆಯಲ್ಲಿ ಪಾಲ್ಗೊಳ್ಳಲು ತಾನು ಅವುಗಳನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದೂ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News