ಮುಂದಿನ 5 ವರ್ಷಗಳಲ್ಲಿ ಸರಕಾರದಿಂದ 130 ಶತಕೋಟಿ ಅಮೆರಿಕ ಡಾಲರ್ ವೆಚ್ಚಕ್ಕೆ ನಿರ್ಧಾರ

Update: 2019-09-10 17:08 GMT

ಹೊಸದಿಲ್ಲಿ, ಸೆ. 10: ಭಾರತ ಭದ್ರತಾ ಬೆದರಿಕೆ ಎದುರಿಸುತ್ತಿರುವಂತೆ, ಮುಂದಿನ 5ರಿಂದ 7 ವರ್ಷಗಳಲ್ಲಿ ಸಶಸ್ತ್ರ ಪಡೆಯ ಸಮರ ಸಾಮರ್ಥ್ಯ ಸುಧಾರಿಸಲು 130 ಶತಕೋಟಿ ಅಮೆರಿಕ ಡಾಲರ್ ವ್ಯಯಿಸುವ ಯೋಜನೆಯನ್ನು ಕೇಂದ್ರ ಸರಕಾರ ದೃಢಪಡಿಸಿದೆ. ಮುಂದಿನ ವರ್ಷಗಳಲ್ಲಿ ನಿರ್ಣಾಯಕ ಶಸ್ತ್ರಾಸ್ತ್ರಗಳ ಶ್ರೇಣಿ, ಕ್ಷಿಪಣಿಗಳು, ಯುದ್ಧ ವಿಮಾನಗಳು ಹಾಗೂ ಜಲಾಂತರ್ಗಾಮಿಗಳನ್ನು ಹೊಂದುವ ಮೂಲಕ ಭೂಸೇನೆ, ನೌಕಾ ಪಡೆ ಹಾಗೂ ವಾಯು ಪಡೆಗಳನ್ನು ಆಧುನಿಕೀಕರಣವನ್ನು ತ್ವರಿತಗೊಳಿಸುವ ವಿಸ್ತೃತ ಯೋಜನೆ ರೂಪಿಸಲು ಸರಕಾರ ನಿರ್ಧರಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಸೇನೆ 2,600 ಪದಾತಿ ದಳದ ಸಮರ ವಾಹನಗಳು, 1,700 ಭವಿಷ್ಯದ ಸಿದ್ಧ ಸಮರ ವಾಹನಗಳನ್ನು ಹೊಂದುವುದು ಸೇರಿದಂತೆ ತ್ವರಿತ ರೀತಿಯಲ್ಲಿ ಪದಾತಿ ದಳದ ಆಧುನಿಕೀಕರಣಕ್ಕೆ ಕೂಡಲೇ ಆದ್ಯತೆ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ. ಇನ್ನೊಂದು ಪ್ರಮುಖ ಆದ್ಯತೆ ಎಂದರೆ, ಭಾರತೀಯ ವಾಯು ಪಡೆ ಬಹು ಉದ್ದೇಶದ 110 ಯುದ್ಧ ವಿಮಾನಗಳನ್ನು ಹೊಂದುವುದು ಎಂದು ಅವು ತಿಳಿಸಿವೆ. ಕಾರ್ಯಾಚರಣೆ ಸಾಮರ್ಥ್ಯ ವೃದ್ಧಿಸಲು 200 ಹಡಗುಗಳು, 500 ವಿಮಾನಗಳು ಹಾಗೂ 24 ದಾಳಿ ಜಲಾಂತರ್ಗಾಮಿಗಳನ್ನು ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಹೊಂದುವ ಯೋಜನೆಯನ್ನು ಈಗಾಗಲೇ ಅಂತಿಮಗೊಳಿಸಿದೆ. ಪ್ರಸ್ತುತ ನೌಕಾ ಪಡೆಯಲ್ಲಿ ಸುಮಾರು 132 ಹಡಗುಗಳು, 220 ವಿಮಾನಗಳು ಹಾಗೂ 15 ಸಬ್ಮೆರಿನ್ಗಳು ಇವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News