ಕರ್ನಾಟಕದಲ್ಲಿ ಬೀಫ್ ನಿಷೇಧ, ಗೋವಾದಲ್ಲಿ ಅನುಮತಿ: ಬಿಜೆಪಿ ದ್ವಂದ್ವದ ಬಗ್ಗೆ ಕಾಂಗ್ರೆಸ್ ಪ್ರಶ್ನೆ

Update: 2019-09-10 17:16 GMT

ಪಣಜಿ, ಸೆ. 10: ಕರ್ನಾಟಕದಲ್ಲಿ ಬೀಫ್ ನಿಷೇಧದ ಬಗ್ಗೆ ಸರಕಾರ ಚಿಂತಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದ ಬಳಿಕ ವಿವಿಧ ರಾಜ್ಯಗಳಲ್ಲಿ ಬೀಫ್ ಕುರಿತ ಬಿಜೆಪಿಯ ಭಿನ್ನ ನೀತಿಯ ಬಗ್ಗೆ ಗೋವಾ ಕಾಂಗ್ರೆಸ್ ಮಂಗಳವಾರ ಪ್ರಶ್ನಿಸಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಎರಡನೇ ಅವಧಿಯ ಆಡಳಿತದ 100 ದಿನಗಳ ಸಾಧನೆ ಕುರಿತು ರಾಜ್ಯದಲ್ಲಿ ಮಾತನಾಡಲು ಆಗಮಿಸಿದ್ದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ, ಕರ್ನಾಟಕದಲ್ಲಿ ಬೀಫ್ ನಿಷೇಧಿಸುವ ಬಗ್ಗೆ ಚಿಂತಿಸಲಾಗುತ್ತಿದೆ. ಆದರೆ, ಇನ್ನಷ್ಟೇ ನಿರ್ಧರಿಸಬೇಕು ಎಂದಿದ್ದರು. ‘‘ಇದು ಕರ್ನಾಟಕದ ಹಲವು ಜನರ ಭಾವನೆ. ಕರ್ನಾಟಕದ ಜನರ ಭಾವನೆಗಳಿಗೆ ಅನುಸಾರವಾಗಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಇದು ಗೋವಾದ ಮೇಲೆ ಪರಿಣಾಮ ಬೀರುತ್ತದೆ ಎಂದು ನಾನು ಭಾವಿಸುವುದಿಲ್ಲ’’ ಎಂದು ಅವರು ಹೇಳಿದ್ದರು. ‘‘ತಮಗೆ ಅನುಕೂಲಕರ ರಾಜ್ಯಗಳಲ್ಲಿ ಭೀಫ್ ನಿಷೇಧ ಜಾರಿಗೆ ತರಲು ಅವರು ಪ್ರಯತ್ನಿಸುತ್ತಿದ್ದಾರೆ. ತಮಗೆ ಅನುಕೂಲಕರ ಅಲ್ಲದ ರಾಜ್ಯಗಳಲ್ಲಿ ಬೀಫ್ ನಿಷೇಧದ ಬಗ್ಗೆ ಚಿಂತಿಸುತ್ತಿಲ್ಲ. ಇದಕ್ಕೆ ಉದಾಹರಣೆ ಗೋವಾ, ಕೇರಳ ಹಾಗೂ ಈಶಾನ್ಯ ರಾಜ್ಯಗಳು’’ ಎಂದು ಕಾಂಗ್ರೆಸ್ ರಾಜ್ಯ ಘಟಕದ ಗಿರೀಶ್ ಚೋಡಂಕರ್ ಮಂಗಳವಾರ ಹೇಳಿದ್ದಾರೆ. ‘‘ಪ್ರತಿಯೊಂದರಲ್ಲೂ ಅವರು ಒಂದೇ ದೇಶ, ಒಂದೇ ಕಾನೂನು, ಒಂದೇ ಚುನಾವಣೆ ಎಂದು ಹೇಳುತ್ತಿದ್ದಾರೆ. ಆದರೆ, ಈ ನೀತಿಯನ್ನು ಬೀಫ್ಗೆ ಯಾಕೆ ಅನ್ವಯಿಸುತ್ತಿಲ್ಲ ? ಇದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿರಿಸಿ ಮಾಡುತ್ತಿರುವುದೇ ? ಅವರ ಉದ್ದೇಶ ಕೆಟ್ಟದ್ದು’’ ಎಂದು ಚೋಡಂಕರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News