ನಾಚಿಕೆಯಾಗುತ್ತಿದೆ: ಜಲಿಯನ್‌ವಾಲ ಬಾಗ್‌ನಲ್ಲಿ ತಲೆತಗ್ಗಿಸಿದ ಬ್ರಿಟನ್ ಬಿಶಪ್

Update: 2019-09-10 18:04 GMT

ಅಮೃತಸರ,ಸೆ.10: ಪಂಜಾಬ್‌ನ ಅಮೃತಸರದಲ್ಲಿರುವ ಜಲಿಯನ್‌ವಾಲ ಬಾಗ್‌ನ ಸ್ಮಾರಕಕ್ಕೆ ಮಂಗಳವಾರ ಭೇಟಿ ನೀಡಿದ ಬ್ರಿಟನ್ ಕ್ಯಾಂಟರ್‌ಬೆರಿಯ ಆರ್ಚ್‌ಬಿಶಪ್ ಜಸ್ಟಿನ್ ವೆಲ್ಬಿ ತಮ್ಮ ತಲೆಯನ್ನು ಅಲ್ಲಿನ ನೆಲಕ್ಕೆ ತಾಗಿಸಿ, ಶತಮಾನದ ಹಿಂದೆ ಅಲ್ಲಿ ನಡೆಸಲಾದ ಅಪರಾಧಕ್ಕೆ ‘ನಾಚಿಕೆಯಾಗುತ್ತಿದೆ’ ಎಂದು ಹೇಳಿದ್ದಾರೆ.

“ಅವರೇನು ಮಾಡಿದ್ದಾರೆ ಎನ್ನುವುದನ್ನು ನೀವು ನೆನಪಿನಲ್ಲಿಟ್ಟುಕೊಂಡಿದ್ದೀರಿ ಮತ್ತು ಅವರ ನೆನಪು ಜೀವಂತವಾಗಿರಲಿದೆ. ಇಲ್ಲಿ ನಡೆಸಿದ ಅಪರಾಧಕ್ಕೆ ನನಗೆ ನಾಚಿಕೆಯಾಗಿದೆ ಮತ್ತು ಕ್ಷಮೆಯಾಚಿಸುತ್ತೇನೆ. ಓರ್ವ ಧಾರ್ಮಿಕ ಮುಖಂಡನಾಗಿ ನಾನು ಈ ದುರಂತಕ್ಕೆ ಸಂತಾಪ ಸೂಚಿಸುತ್ತೇನೆ” ಎಂದು ವೆಲ್ಬಿ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿದ ಆರ್ಚ್‌ಬಿಶಪ್, “ಅಮೃತಸರದಲ್ಲಿ ಇಂದು ನಾನು ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡ ನಡೆದ ಭಯಾನಕ ಸ್ಥಳಕ್ಕೆ ಭೇಟಿ ನೀಡಿದಾಗ ದುಃಖ, ಅವಮಾನ ಮತ್ತು ನಾಚಿಕೆಯ ಭಾವ ನನ್ನನ್ನು ಕಾಡಿದೆ. ಇಲ್ಲಿ ದೊಡ್ಡ ಸಂಖ್ಯೆಯಲ್ಲಿ ಸಿಖ್ಖರು ಮತ್ತು ಹಿಂದುಗಳು, ಮುಸಲ್ಮಾನರು ಮತ್ತು ಕ್ರೈಸ್ತರನ್ನು 1919ರಲ್ಲಿ ಬ್ರಿಟಿಶ್ ಸೇನೆ ಹತ್ಯೆ ಮಾಡಿತ್ತು” ಎಂದು ತಿಳಿಸಿದ್ದಾರೆ.

ಘಟನೆಯ ಬಗ್ಗೆ ಬ್ರಿಟನ್ ಸರಕಾರ ಈವರೆಗೂ ಭಾರತದ ಕ್ಷಮೆ ಕೇಳಿಲ್ಲ. ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡದ ನೂರನೇ ವರ್ಷಾಚರಣೆಯ ಸಂದರ್ಭದಲ್ಲಿ ಬ್ರಿಟನ್‌ನ ಮಾಜಿ ಪ್ರಧಾನಿ ತೆರೆಸ ಮೇ, ಈ ಘಟನೆಯ ಬಗ್ಗೆ ತೀವ್ರ ಪಶ್ಚಾತ್ತಾಪವಿದೆ ಎಂದು ಹೇಳಿಕೆ ನೀಡಿದ್ದರು. ಈ ಸಂದರ್ಭದಲ್ಲಿ ಹೇಳಿಕೆ ನೀಡಿದ್ದ ಆರ್ಚ್‌ಬಿಶಪ್, ಹತ್ಯಾಕಾಂಡವನ್ನು ಖಂಡಿಸುತ್ತಾ, ಬ್ರಿಟಿಶರಾಗಿ ನಾವು ನಮ್ಮ ವಸಾಹತು ಹಿನ್ನೆಲೆಯ ಈ ನಾಚಿಕೆಗೇಡಿನ ಅಧ್ಯಾಯದಿಂದ ನಾವು ತಪ್ಪಿಸಿಕೊಳ್ಳುವಂತಿಲ್ಲ ಎಂದು ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News