ರೋಹಿತ್ ಶರ್ಮಾಗೆ ಅವಕಾಶ ಸಾಧ್ಯತೆ

Update: 2019-09-10 18:10 GMT

ಹೊಸದಿಲ್ಲಿ, ಸೆ.10: ಆರಂಭಿಕ ಬ್ಯಾಟ್ಸ್‌ಮನ್ ಲೋಕೇಶ್ ರಾಹುಲ್ ಫಾರ್ಮ್ ಕಳೆದುಕೊಂಡಿರುವುದು ಟೀಮ್ ಇಂಡಿಯಾಕ್ಕೆ ತಲೆನೋವಾಗಿ ಪರಿಣಮಿಸಿದೆ. ಈ ಕಾರಣದಿಂದಾಗಿ ರೋಹಿತ್ ಶರ್ಮಾರಿಗೆ ಮುಂಬರುವ ದಕ್ಷಿಣ ಆಫ್ರಿಕ ವಿರುದ್ದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾದ ಅಂತಿಮ ಹನ್ನೊಂದರ ಬಳಗದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಸ್ಥಾನ ದೊರೆಯುವ ಸಾಧ್ಯತೆ ಇದೆ.

ರಾಹುಲ್ ಬದಲಿಗೆ ರೋಹಿತ್ ಶರ್ಮಾ ಟೆಸ್ಟ್‌ನಲ್ಲಿ ಇನಿಂಗ್ಸ್ ಆರಂಭಿಸುವ ಬಗ್ಗೆ ಆಯ್ಕೆ ಸಮಿತಿಯ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ ಅವರು ಸುಳಿವು ನೀಡಿದ್ದಾರೆ. ಭಾರತದ ಏಕದಿನ ತಂಡದ ಉಪನಾಯಕ ರೋಹಿತ್ ಶರ್ಮಾ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಆದರೆ ವೆಸ್ಟ್‌ಇಂಡೀಸ್ ವಿರುದ್ಧ ಎರಡು ಟೆಸ್ಟ್ ಪಂದ್ಯಗಳಿಗೆ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ರೋಹಿತ್ ಟೆಸ್ಟ್‌ನಲ್ಲಿ ಸಾಮಾನ್ಯವಾಗಿ ಮಧ್ಯಮ ಸರದಿಯ ದಾಂಡಿಗನಾಗಿ ಕಣಕ್ಕಿಳಿಯುತ್ತಿದ್ದರು. ಆದರೆ ಮಧ್ಯಮ ಸರದಿಯಲ್ಲಿ ಅಜಿಂಕ್ಯ ರಹಾನೆ ಮತ್ತು ಹನುಮ ವಿಹಾರಿ ವೆಸ್ಟ್‌ಇಂಡೀಸ್ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ಕಾರಣದಿಂದಾಗಿ ರೋಹಿತ್ ಶರ್ಮಾಗೆ ಮಧ್ಯಮ ಸರದಿಯಲ್ಲಿ ಅವಕಾಶ ಇಲ್ಲದಾಗಿದೆ. ಆರಂಭಿಕ ಬ್ಯಾಟ್ಸ್‌ಮನ್ ಸ್ಥಾನಕ್ಕೆ ರೋಹಿತ್ ಶರ್ಮಾಗೆ ಅವಕಾಶ ನೀಡಲು ಆಯ್ಕೆ ಸಮಿತಿ ಚಿಂತನೆ ನಡೆಸಿದೆ.

‘‘ ವೆಸ್ಟ್ ಇಂಡೀಸ್ ವಿರುದ್ಧ ಸರಣಿಯ ಬಳಿಕ ಆಯ್ಕೆ ಸಮಿತಿ ಸಭೆ ಸೇರಿಲ್ಲ. ತಂಡದ ಆಯ್ಕೆ ವೇಳೆ ರೋಹಿತ್ ಶರ್ಮಾರನ್ನು ಆರಂಭಿಕ ಬ್ಯಾಟ್ಸ್‌ಮನ್ ಸ್ಥಾನಕ್ಕೆ ಸೇರಿಸಿಕೊಳ್ಳುವ ವಿಚಾರದಲ್ಲಿ ಚರ್ಚೆ ನಡೆಸಲಿದ್ದೇವೆ’’ ಎಂದು ಪ್ರಸಾದ್ ತಿಳಿಸಿದ್ದಾರೆ.

 ‘‘ಲೋಕೇಶ್ ರಾಹುಲ್ ಖಂಡಿತವಾಗಿಯೂ ಓರ್ವ ಶ್ರೇಷ್ಠ ಪ್ರತಿಭಾವಂತ ಆಟಗಾರ. ಅವರಿಗೆ ಈಗ ಸ್ವಲ್ಪ ಹಿನ್ನಡೆಯಾಗಿದೆ. ಮುಂದೆ ಖಂಡಿತವಾಗಿಯೂ ಅವರು ಫಾರ್ಮ್‌ಗೆ ಮರಳುತ್ತಾರೆ ’’ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ಎಂಎಸ್‌ಕೆ ಪ್ರಸಾದ್ ಹೇಳಿದ್ದಾರೆ.

ರಾಹುಲ್ ವೆಸ್ಟ್‌ಇಂಡೀಸ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಕ್ರಮವಾಗಿ 13, 6,44, 38 ರನ್ ಗಳಿಸಿದ್ದರು.

  ಕುಲದೀಪ ಯಾದವ್‌ಮತ್ತು ಯಜುವೇಂದ್ರ ಚಹಾಲ್ ವೆಸ್ಟ್‌ಇಂಡೀಸ್ ವಿರುದ್ಧ ನಡೆದ ಟ್ವೆಂಟಿ-20 ಸರಣಿಗೆ ಟೀಮ್ ಇಂಡಿಯಾದಲ್ಲಿ ಇರಲಿಲ್ಲ. ಮುಂಬರುವ ದಕ್ಷಿಣ ಆಫ್ರಿಕ ಸರಣಿಗೂ ಅವರು ತಂಡದಲ್ಲಿ ಸ್ಥಾನ ಪಡೆದಿಲ್ಲ. ಆದರೆ ಆಸ್ಟ್ರೇಲಿಯದಲ್ಲಿ ಮುಂದಿನ ವರ್ಷ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್ ಟೂರ್ನಿಗೆ ತಂಡದಲ್ಲಿ ಅವರು ಅವಕಾಶ ಪಡೆಯಲಿದ್ದಾರೆ.

ರಾಹುಲ್ ಚಹಾರ್ ಮತ್ತು ವಾಶಿಂಗ್ಟನ್ ಸುಂದರ್ ದಕ್ಷಿಣ ಆಫ್ರಿಕ ವಿರುದ್ಧ ಟ್ವೆಂಟಿ-20 ಸರಣಿಗೆ ತಂಡದಲ್ಲಿದ್ದಾರೆ. ಟ್ವೆಂಟಿ-20 ಸರಣಿಯ ಮೊದಲ ಪಂದ್ಯ ಧರ್ಮಶಾಲಾದಲ್ಲಿ ಸೆ.15ರಂದು ನಡೆಯಲಿದೆ. ಇಬ್ಬರು ಆಟಗಾರರು ಕಳೆದ ತಿಂಗಳು ವೆಸ್ಟ್‌ಇಂಡೀಸ್ ಪ್ರವಾಸ ಸರಣಿಯಲ್ಲಿ ಭಾಗವಹಿಸಿದ್ದರು.

‘‘ಮುಂಬರುವ ಟ್ವೆಂಟಿ-20 ವಿಶ್ವಕಪ್‌ನ್ನು ಗಮನದಲ್ಲಿಟ್ಟುಕೊಂಡು ಸ್ಪಿನ್ ವಿಭಾಗಕ್ಕೆ ವಿಭಿನ್ನ ಶೈಲಿಯ ಯುವ ಸ್ಪಿನ್ನರ್‌ಗಳನ್ನು ಸೇರಿಸಿಕೊಳ್ಳುವ ನಿಟ್ಟಿನಲ್ಲಿ ಯೋಚಿಸಲಾಗುತ್ತಿದೆ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಕಳೆದ ಎರಡು ವರ್ಷಗಳಿಂದ ಚಹಾಲ್ ಮತ್ತು ಕುಲದೀಪ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ’’ ಎಂದು ಪ್ರಸಾದ್ ಹೆಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News