ಜಮ್ಮು –ಕಾಶ್ಮೀರದಲ್ಲಿ ಎನ್ ಕೌಂಟರ್ : ಎಲ್ಇಟಿಯ ಓರ್ವ ಉಗ್ರ ಬಲಿ

Update: 2019-09-11 14:19 GMT

ಶ್ರೀನಗರ, ಸೆ.11: ಜಮ್ಮು ಮತ್ತು ಕಾಶ್ಮೀರದ ಸೊಪೋರ್ ಜಿಲ್ಲೆಯಲ್ಲಿ ಬುಧವಾರ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಸಂಭವಿಸಿದ ಗುಂಡಿನ ಚಕಮಕಿಯಲ್ಲಿ ಲಷ್ಕರ್-ಎ-ತೋಯ್ಬಾ (ಎಲ್ಇಟಿ) ಭಯೋತ್ಪಾದಕ ಸಂಘಟನೆಗೆ ಸೇರಿದ ಆಸಿಫ್  ಮಕ್ಬೂಲ್ ಭಟ್ ಸಾವನ್ನಪ್ಪಿದ್ದಾನೆ.

ಮಕ್ಬೂಲ್ ಭಟ್ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ. ಮೂಲಗಳ ಪ್ರಕಾರ ಮಕ್ಬೂಲ್ ಭಟ್ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಸಂಘಟನೆಯಾದ ಎಲ್ಇಟಿಗೆ ಸೇರಿದ್ದು ಕಣಿವೆಯಲ್ಲಿ ಸಕ್ರಿಯನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗೆ ನಡೆದ ಹಣ್ಣಿನ ವ್ಯಾಪಾರಿ ಕುಟುಂಬದ ಸದಸ್ಯರ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಭಟ್ ಕಾರಣವಾಗಿದ್ದು, ಇದರಲ್ಲಿ ಹಣ್ಣಿನ ವ್ಯಾಪಾರಿ ಕುಟುಂಬದ ಮೂವರು ಸದಸ್ಯರು ಹಾಗೂ 5 ವರ್ಷದ ಬಾಲಕಿ ಸೇರಿದಂತೆ ನಾಲ್ವರು ಗಾಯಗೊಂಡಿದ್ದರು.

ಸೋಪೋರ್ನಲ್ಲಿ ಶಫಿ ಆಲ್ಮ್ ಎಂಬ ವಲಸೆ ಕಾರ್ಮಿಕನನ್ನು ಗುಂಡಿಕ್ಕಿ ಕೊಂದ ಆರೋಪವು ಈತನ ಮೇಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸೆಪ್ಟೆಂಬರ್ 9 ರಂದು ಸೇನೆ , ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಎಲ್ಇಟಿಯ ಭಯೋತ್ಪಾದಕ ಸಂಘಟನೆಗೆ ಸೇರಿದ ಸೋಪೋರ್ ಪ್ರದೇಶದ ಎಂಟು ಉಗ್ರರನ್ನು ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News