ಫಾರೂಕ್ ಅಬ್ದುಲ್ಲಾರ ಬಿಡುಗಡೆ ಕೋರಿ ಸುಪ್ರೀಂ ಕೋರ್ಟ್ ಗೆ ವೈಕೋ ಅರ್ಜಿ

Update: 2019-09-11 14:03 GMT

ಹೊಸದಿಲ್ಲಿ,ಸೆ.11: ಗೃಹಬಂಧನದಲ್ಲಿರುವ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್‌ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರ ಬಿಡುಗಡೆಯನ್ನು ಕೋರಿ ಎಂಡಿಎಂಕೆ ಮುಖ್ಯಸ್ಥ ವೈಕೋ ಅವರು ಬುಧವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ್ದಾರೆ.

ಸೆ.15ರಂದು ಚೆನ್ನೈನಲ್ಲಿ ಮಾಜಿ ತಮಿಳುನಾಡು ಮುಖ್ಯಮಂತ್ರಿ ಸಿ.ಎನ್.ಅಣ್ಣಾದುರೈ ಅವರ ಜನ್ಮ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿರುವ ಸಮ್ಮೇಳನದಲ್ಲಿ ಅಬ್ದುಲ್ಲಾ ಭಾಗವಹಿಸಲಿದ್ದರು ಎಂದು ತನ್ನ ಅರ್ಜಿಯಲ್ಲಿ ತಿಳಿಸಿರುವ ವೈಕೋ,ಅವರನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಹಾಜರು ಪಡಿಸಲು ಸರಕಾರಕ್ಕೆ ನಿರ್ದೇಶ ನೀಡುವಂತೆ ಮತ್ತು ಅವರನ್ನು ಬಿಡುಗಡೆಗೊಳಿಸುವಂತೆ ಕೋರಿದ್ದಾರೆ.

ಚೆನ್ನೈಗೆ ಪ್ರಯಾಣಿಸಲು ಅಬ್ದುಲ್ಲಾ ಅವರಿಗೆ ಅನುಮತಿಯನ್ನು ಕೋರಿ ತಾನು ಆ.28ರಂದು ಕೇಂದ್ರಕ್ಕೆ ಬರೆದಿರುವ ಪತ್ರಕ್ಕೆ ಇನ್ನೂ ಉತ್ತರಿಸಲಾಗಿಲ್ಲ ಎಂದು ಅರ್ಜಿಯಲ್ಲಿ ತಿಳಿಸಿರುವ ಅವರು,ಸರಕಾರದ ಕ್ರಮಗಳು ಸಂಪೂರ್ಣವಾಗಿ ಕಾನೂನುಬಾಹಿರವಾಗಿದ್ದು ನಿರಂಕುಶತೆಯಿಂದ ಕೂಡಿವೆ ಮತ್ತು ಪ್ರಜಾಪ್ರಭುತ್ವದ ಅಡಿಗಲ್ಲಾಗಿರುವ ಜೀವ ರಕ್ಷಣೆ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು,ಬಂಧನದಿಂದ ರಕ್ಷಣೆಯ ಹಕ್ಕು ಹಾಗೂ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳನ್ನು ಉಲ್ಲಂಘಿಸಿವೆ ಎಂದು ಪ್ರತಿಪಾದಿಸಿದ್ದಾರೆ.

ಕೇಂದ್ರವು ಜಮ್ಮು-ಕಾಶ್ಮೀರದಲ್ಲಿ ಅಘೋಷಿತ ತುರ್ತು ಸ್ಥಿತಿಯನ್ನು ಹೇರುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಕೇಂದ್ರವು ಆ.5ರಂದು ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂದೆಗೆದುಕೊಂಡಾಗಿನಿಂದ ಅಬ್ದುಲ್ಲಾ ಸೇರಿದಂತೆ ಹಲವಾರು ಕಾಶ್ಮೀರಿ ರಾಜಕಾರಣಿಗಳನ್ನು ಬಂಧನದಲ್ಲಿರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News