ಜೈಲಿನಲ್ಲಿರುವ ಚಿದಂಬರಂ: ಟ್ಟೀಟ್ ಮಾಡುತ್ತಿರುವವರು ಯಾರು ಗೊತ್ತಾ?

Update: 2019-09-11 14:38 GMT

ಹೊಸದಿಲ್ಲಿ,ಸೆ.11: ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಬಂಧಿತರಾಗಿ ತಿಹಾರ್ ಜೈಲು ಸೇರಿರುವ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರು ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಸಂದೇಶಗಳನ್ನು ಪೋಸ್ಟ್ ಮಾಡಲು ತನ್ನ ಕುಟುಂಬ ಸದಸ್ಯರ ನೆರವು ಪಡೆಯುತ್ತಿದ್ದಾರೆ.

ಬುಧವಾರ ತಾಜಾ ಟ್ವೀಟೊಂದರಲ್ಲಿ ಆರ್ಥಿಕತೆ ಸ್ಥಿತಿಯ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿರುವ ಅವರು,ಈ ನಿರಾಶಾದಾಯಕ ಮತ್ತು ಅಂಧಕಾರದ ಸ್ಥಿತಿಯಿಂದ ದೇಶವನ್ನು ಪಾರು ಮಾಡಲು ಸರಕಾರವು ಯೋಜನೆಯನ್ನು ಹೊಂದಿದೆಯೇ ಎಂದು ಪ್ರಶ್ನಿಸಿದ್ದಾರೆ.

ನ್ಯಾಯ ಮತ್ತು ಅನ್ಯಾಯದ ನಡುವೆ ಅಂತರವನ್ನು ಗುರುತಿಸುವ ಬಡವರ ಸಾಮರ್ಥ್ಯವನ್ನೂ ಅವರು ಪ್ರಶಂಸಿಸಿದ್ದಾರೆ.

“ನಿಮ್ಮ ಬೆಂಬಲಕ್ಕಾಗಿ ನಾನು ಆಭಾರಿಯಾಗಿದ್ದೇನೆ. ಕಳೆದ ಕೆಲವು ದಿನಗಳಲ್ಲಿ ನಾನು ಭೇಟಿಯಾಗಿದ್ದ ಮತ್ತು ಸಂವಾದ ನಡೆಸಿದ್ದ ಬಡಜನರಲ್ಲಿಯ ನ್ಯಾಯ ಮತ್ತು ಅನ್ಯಾಯದ ನಡುವಿನ ಅಂತರವನ್ನು ಗುರುತಿಸುವ ಸಾಮರ್ಥ್ಯವು ನನ್ನಲ್ಲಿ ಅಚ್ಚರಿಯನ್ನುಂಟು ಮಾಡಿದೆ” ಎಂದು ಟ್ವೀಟ್‌ನಲ್ಲಿ ಹೇಳಿರುವ ಅವರು,ಆರ್ಥಿಕತೆಯ ಕುರಿತು ನಾನು ತೀವ್ರ ಕಳವಳಗೊಂಡಿದ್ದೇನೆ. ಬಡಜನರು ಅತ್ಯಂತ ಸಂಕಷ್ಟಕ್ಕೊಳಗಾಗಿದ್ದಾರೆ.

ಉದ್ಯೋಗ ನಷ್ಟ,ಕಡಿಮೆ ವ್ಯಾಪಾರ ಮತ್ತು ಕಡಿಮೆ ಹೂಡಿಕೆ ಇವೆಲ್ಲ ಬಡವರು ಮತ್ತು ಮಧ್ಯಮವರ್ಗದವರನ್ನು ಬವಣೆಗೆ ಸಿಲುಕಿಸಿವೆ. ಇಂತಹ ನಿರಾಶಾದಾಯಕ ಸ್ಥಿತಿಯಿಂದ ದೇಶವನ್ನು ಪಾರು ಮಾಡಲು ಯೋಜನೆಯೆಲ್ಲಿದೆ ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News