ನಿರ್ಮಲಾ ಸೀತಾರಾಮನ್ ಹೇಳಿಕೆ ತಪ್ಪಾಗಿ ಉಲ್ಲೇಖಿಸಲಾಗಿದೆ: ನಿತಿನ್ ಗಡ್ಕರಿ

Update: 2019-09-11 16:08 GMT

ಹೊಸದಿಲ್ಲಿ, ಸೆ.11: ವಾಹನ ಮಾರಾಟ ಕುಸಿತದ ಕುರಿತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನೀಡಿದ್ದ ಹೇಳಿಕೆಯನ್ನು ಮಾಧ್ಯಮಗಳಲ್ಲಿ ತಪ್ಪಾಗಿ ಉಲ್ಲೇಖಿಸಲಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಓಲಾ ಮತ್ತು ಉಬರ್‌ನಿಂದಾಗಿ ವಾಹನ ಮಾರಾಟ ಕುಸಿದಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಬಗ್ಗೆ ಉಲ್ಲೇಖಿಸಿದ ಗಡ್ಕರಿ, ವಾಹನ ಮಾರಾಟ ಮಂದಗತಿಯಲ್ಲಿ ಸಾಗಲು ಹಲವು ಕಾರಣಗಳಿದ್ದು ಓಲಾ, ಉಬೇರ್ ಕೂಡಾ ಅದರಲ್ಲಿ ಒಂದಾಗಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು. ಅದನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ ಎಂದರು.

ಇ-ರಿಕ್ಷಾದ ಕಡೆಗೆ ಜನರ ಒಲವು ಹೆಚ್ಚಿದ ಕಾರಣ ಆಟೋರಿಕ್ಷಾ ಮಾರಾಟ ಕಡಿಮೆಯಾಗಿದೆ. ದೇಶದಾದ್ಯಂತ ಸರಕಾರಿ ಸಾರಿಗೆ ವ್ಯವಸ್ಥೆಯಲ್ಲಿ ಆಗಿರುವ ಸುಧಾರಣೆ ವಾಹನ ಮಾರಾಟ ಕುಸಿಯಲು ಮತ್ತೊಂದು ಕಾರಣವಾಗಿದೆ ಎಂದು ನಿತಿನ್ ಗಡ್ಕರಿ ಹೇಳಿದರು. ಜಿಎಸ್‌ಟಿಯಲ್ಲಿ ಶೇ.10 ಕಡಿತಗೊಳಿಸಲು ಒತ್ತಾಯ ಕೇಳಿಬರುತ್ತಿದ್ದು ಈ ಕುರಿತು ವಿತ್ತ ಸಚಿವರೊಂದಿಗೆ ಚರ್ಚೆ ನಡೆಸಿದ್ದೇನೆ. ಜಿಎಸ್‌ಟಿ ಕುರಿತ ಯಾವುದೇ ನಿರ್ಧಾರ ಜಿಎಸ್‌ಟಿ ಸಮಿತಿ ಸಭೆಯಲ್ಲಿ ತೆಗೆದುಕೊಳ್ಳಲಾಗುತ್ತದೆ. ಜಿಎಸ್‌ಟಿ ದರ ಕಡಿತದ ವಿಷಯದಲ್ಲಿ ಈಗ ಚೆಂಡು ವಿತ್ತ ಸಚಿವಾಲಯದ ಅಂಗಣದಲ್ಲಿದೆ ಎಂದು ಗಡ್ಕರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News