ಅಫ್ಘಾನ್ ಸರಕಾರ ಮತ್ತು ತಾಲಿಬಾನ್ ಮಧ್ಯೆ ನೇರ ಮಾತುಕತೆಗೆ ಭಾರತದ ಬೆಂಬಲ: ಅಕ್ಬರುದ್ದೀನ್

Update: 2019-09-11 16:17 GMT

ವಿಶ್ವಸಂಸ್ಥೆ, ಸೆ.11: ಅಫ್ಘಾನಿಸ್ತಾನ ಸರಕಾರ ಮತ್ತು ತಾಲಿಬಾನ್ ಉಗ್ರರ ತಂಡದ ಮಧ್ಯೆ ನೇರ ಮಾತುಕತೆ ನಡೆಯಬೇಕೆಂದು ಭಾರತ ಬಯಸುತ್ತದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಹೇಳಿದ್ದಾರೆ.

ವಿಶ್ವಸಂಸ್ಥೆಯ ಭದ್ರತಾ ಸಮಿತಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಯಾವುದೇ ಒಪ್ಪಂದ ಅಥವಾ ಮಾತುಕತೆಯ ಪರಿಣಾಮ ಅಫ್ಘಾನಿಸ್ತಾನದ ಜನರ ಮೇಲಾಗುತ್ತದೆ . ಆದ್ದರಿಂದ ನೇರ ಮಾತುಕತೆ ನಡೆಯಬೇಕೆಂಬ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರ್ರಸ್ ಕರೆಗೆ ಭಾರತದ ಬೆಂಬಲವಿದೆ. ಎಲ್ಲರನ್ನೂ ಒಳಗೊಂಡ ಮತ್ತು ಪ್ರಜಾಪ್ರಭುತ್ವ ರೀತಿಯ ಮಾತುಕತೆಯಿಂದ ಹೊರಬೀಳುವ ರಾಜಕೀಯ ಆದೇಶವು ಸಾಂವಿಧಾನಿಕ ಮಾನ್ಯತೆ ಹೊಂದಿರುತ್ತದೆ ಮತ್ತು ಇದರಿಂದ ಮಾತ್ರ ಸ್ಥಿರತೆ ಸಾಧ್ಯ ಎಂದು ಅಕ್ಬರುದ್ದೀನ್ ಹೇಳಿದರು.

ಅಫ್ಘಾನಿಸ್ತಾನಕ್ಕೆ ದೇಶದೊಳಗಿಂದ ಮಾತ್ರವಲ್ಲ, ಗಡಿಯಾಚೆಗಿಂದಲೂ ಭಯೋತ್ಪಾದಕರ ಬೆದರಿಕೆ ಎದುರಾಗಿದೆ. ತಾಲಿಬಾನ್, ಹಕ್ಕಾನಿ ಉಗ್ರರ ತಂಡ, ಆಲ್ ಖೈದಾ, ಲಷ್ಕರೆ ತೈಯಬ್ಬ, ಜೈಷೆ ಮುಹಮ್ಮದ್ ಮತ್ತಿತರ ಉಗ್ರರ ಸಂಘಟನೆಗೆ ಅಫ್ಘಾನ್ ಗಡಿಯಾಚೆಗಿನ ಕೆಲವು ಪ್ರದೇಶಗಳು ಆಶ್ರಯ ಮತ್ತು ನೆರವು ನೀಡುತ್ತಿವೆ. ಇಂತಹ ಉಗ್ರರ ಸಂಘಟನೆಗಳ ಬಗ್ಗೆಯೂ ಗಮನ ಹರಿಸಬೇಕಿದೆ ಎಂದವರು ಹೇಳಿದರು.

ಭಾರತವು ಭಯೋತ್ಪಾದಕ ಕೃತ್ಯಗಳ ಬಲಿಪಶುವಾಗಿರುವ ಕಾರಣ ಭಯೋತ್ಪಾದನೆ ಸಮಸ್ಯೆಯನ್ನು ಸ್ಪಷ್ಟವಾಗಿ ಅರಿತುಕೊಂಡಿದೆ. ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ರೀತಿಯಲ್ಲಿ ಆಯ್ಕೆಯಾದ ಸರಕಾರದ ಆಡಳಿತಕ್ಕೆ ಬರುವ ಮೂಲಕ ಸಮಸ್ಯೆಗೆ ಶಾಂತಿಯುತ ಪರಿಹಾರ ದೊರಕಬೇಕು ಎಂಬುದು ಭಾರತದ ಆಶಯವಾಗಿದೆ. ದೇಶಕ್ಕೆ ಸೂಕ್ತವಾಗಿರುವ ಮತ್ತು ಅತ್ಯಂತ ಘನತೆಯ ರೀತಿಯಲ್ಲಿ ಅನುಷ್ಠಾನಗೊಳಿಸಬಲ್ಲ ಪರಿಹಾರ ಹುಡುಕುವ ಪ್ರಕ್ರಿಯೆಗೆ ಎಲ್ಲರೂ ಕೈಜೋಡಿಸಬೇಕು ಎಂದವರು ಹೇಳಿದರು.

ತಾಲಿಬಾನ್‌ನೊಂದಿಗೆ ಯಾವುದೇ ಮಾತುಕತೆ ಸಾಧ್ಯವಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ ಮರುದಿನವೇ ಭಾರತ ಈ ಹೇಳಿಕೆ ನೀಡಿರುವುದು ಗಮನಾರ್ಹವಾಗಿದೆ. ಟ್ರಂಪ್ ಹೇಳಿಕೆಗೆ ತಿರುಗೇಟು ನೀಡಿದ್ದ ತಾಲಿಬಾನ್, ಅಫ್ಘಾನಿಸ್ತಾನದಲ್ಲಿರುವ ಅಮೆರಿಕದ ಸೇನೆಯ ವಿರುದ್ಧದ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿತ್ತು. ಅಫ್ಘಾನಿಸ್ತಾನದಲ್ಲಿ ಸೆಪ್ಟೆಂಬರ್ 28ರಂದು ಅಧ್ಯಕ್ಷೀಯ ಚುನಾವಣೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News