ಬ್ರಿಟಿಶ್ ಸಂಸತ್ ಅಮಾನತು ಕಾನೂನುಬಾಹಿರ: ಸ್ಕಾಟ್‌ಲ್ಯಾಂಡ್‌ನ ಅತ್ಯುನ್ನತ ನ್ಯಾಯಾಲಯ ತೀರ್ಪು

Update: 2019-09-11 16:41 GMT

 ಲಂಡನ್, ಸೆ. 11: ಬ್ರಿಟನ್ ಸಂಸತ್ತನ್ನು ಐದು ವಾರಗಳ ಕಾಲ ಅಮಾನತಿನಲ್ಲಿಡಲು ಪ್ರಧಾನಿ ಬೊರಿಸ್ ಜಾನ್ಸನ್ ತೆಗೆದುಕೊಂಡಿರುವ ನಿರ್ಧಾರವು ಕಾನೂನುಬಾಹಿರವಾಗಿದೆ ಎಂದು ಸ್ಕಾಟ್‌ಲ್ಯಾಂಡ್‌ನ ಅತ್ಯುನ್ನತ ನ್ಯಾಯಾಲಯ ಬುಧವಾರ ಹೇಳಿದೆ.

ಬ್ರಿಟಿಶ್ ಸಂಸತ್ತನ್ನು ಸೋಮವಾರದಿಂದ ಅಕ್ಟೋಬರ್ 14ರವರೆಗೆ ಅಮಾನತಿನಲ್ಲಿಡಲಾಗಿದೆ. ಜಾನ್ಸನ್‌ರ ಬ್ರೆಕ್ಸಿಟ್ ಯೋಜನೆಯನ್ನು ಸಂಸದರು ಪರಿಶೀಲಿಸುವುದನ್ನು ತಡೆಯುವುದಕ್ಕಾಗಿ ಹಾಗೂ ಒಪ್ಪಂದರಹಿತ ಬ್ರೆಕ್ಸಿಟನ್ನು ಕಾರ್ಯರೂಪಕ್ಕೆ ತರುವುದಕ್ಕಾಗಿ ಅವರು ಈ ಕ್ರಮ ತೆಗೆದುಕೊಂಡಿದ್ದಾರೆ ಎಂದು ಬ್ರಿಟನ್ ಸಂಸದರು ಆರೋಪಿಸಿದ್ದಾರೆ.

‘‘ಸಂಸತ್‌ನ ಅಧಿವೇಶನವನ್ನು ತಕ್ಷಣ ಕರೆಯಬೇಕು ಎಂದು ನಾವು ಕರೆ ನೀಡುತ್ತೇವೆ’’ ಎಂದು ಸ್ಕಾಟಿಶ್ ನ್ಯಾಶನಲ್ ಪಾರ್ಟಿಯ ಸಂಸದೆ ಜೋನಾ ಚೆರಿ ಹೇಳಿದರು.

ಸಂಸತ್ತನ್ನು ಅಮಾನತಿನಲ್ಲಿಡಲು ಪ್ರಧಾನಿ ತೆಗೆದುಕೊಂಡಿರುವ ನಿರ್ಧಾರವನ್ನು ಅವರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ನ್ಯಾಯಾಲಯದ ತೀರ್ಪಿನ ಬಳಿಕ ಅವರು ‘ಸ್ಕೈ ನ್ಯೂಸ್’ ಜೊತೆ ಮಾತನಾಡುತ್ತಿದ್ದರು.

ಇದೇ ಮಾದರಿಯ ಸವಾಲನ್ನು ಶುಕ್ರವಾರ ಲಂಡನ್ ಹೈಕೋರ್ಟ್ ತಿರಸ್ಕರಿಸಿತ್ತು. ಅದನ್ನು ಪ್ರಶ್ನಿಸಿ ಬ್ರೆಕ್ಸಿಟ್ ವಿರೋಧಿ ಕಾರ್ಯಕರ್ತರು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ಸೆಪ್ಟಂಬರ್ 17ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News