ಶಿಕ್ಷಣದ ಕೊರತೆಯ ಕಾರಣ ಮೋದಿಯಿಂದ ಅಸಮರ್ಥ ಸಚಿವರ ಆಯ್ಕೆ: ಸುಬ್ರಮಣಿಯನ್ ಸ್ವಾಮಿ

Update: 2019-09-11 16:48 GMT

ಹೊಸದಿಲ್ಲಿ, ಸೆ.11: ಶೈಕ್ಷಣಿಕ ಹಿನ್ನೆಲೆಯ ಕೊರತೆಯು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಆರ್ಥಿಕತೆಯನ್ನು ನಿಭಾಯಿಸಲು ತನ್ನ ಸ್ನೇಹಿತರು ಮತ್ತು ‘ಬೇರುಗಳಿಲ್ಲದ ಸಚಿವರನ್ನು’ ನೆಚ್ಚಿಕೊಳ್ಳುವಂತೆ ಮಾಡಿದೆ. ಈ ಸ್ನೇಹಿತರು ಮತ್ತು ಸಚಿವರು ಆರ್ಥಿಕತೆಯ ಕುರಿತು ಕಟುಸತ್ಯವನ್ನು ಮೋದಿಯವರಿಗೆಂದೂ ಹೇಳುವುದಿಲ್ಲ. ನೋಟು ರದ್ದತಿಯಂತಹ ಮೂರ್ಖತನ ಮತ್ತು ಜಿಎಸ್‌ಟಿಯಂತಹ ಹುಚ್ಚುತನಕ್ಕೆ ಕಾರಣವಾದ ಆರ್ಥಿಕ ನೀತಿಯ ಕಹಿಸತ್ಯವನ್ನು ಅವರೆಂದೂ ಮೋದಿಯವರಿಗೆ ಮನವರಿಕೆ ಮಾಡುವುದಿಲ್ಲ ಎಂದು ಹಿರಿಯ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ತನ್ನ ಇತ್ತೀಚಿನ ಪುಸ್ತಕದಲ್ಲಿ ಕಟುವಾಗಿ ಟೀಕಿಸಿದ್ದಾರೆ.

ತನ್ನ ನೂತನ ಪುಸ್ತಕ ‘ರಿಸೆಟ್: ರಿಗೇನಿಂಗ್ ಇಂಡಿಯಾಸ್ ಇಕನಾಮಿಕ್ ಲೆಗಸಿ’ಯಲ್ಲಿ ಬಿಜೆಪಿ ನೇತೃತ್ವದ ಸರಕಾರದಿಂದ ಆರ್ಥಿಕತೆಯ ನಿರ್ವಹಣೆ ಮತ್ತು ಮೋದಿಯವರು ಆಯ್ದುಕೊಂಡಿರುವ ಸಲಹೆಗಾರರ ಕುರಿತು ಗಂಭೀರ ಆರೋಪಗಳನ್ನು ಮಾಡಿರುವ ಸ್ವಾಮಿ, ಜಿಡಿಪಿ ಆಧಾರ ವರ್ಷದ ಬದಲಾವಣೆ, ನಿರುದ್ಯೋಗ ಅಂಕಿಅಂಶ ಮತ್ತು ನೋಟು ರದ್ದತಿಯ ಪರಿಣಾಮಗಳಂತಹ ವಿಷಯಗಳಲ್ಲಿ ತಪ್ಪು ಮಾಹಿತಿಗಳನ್ನು ನೀಡಿರುವುದನ್ನು ಪ್ರಶ್ನಿಸಿದ್ದಾರೆ. ಆರ್ಥಿಕತೆಯ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಮೋದಿಯವರ ಸಂಪುಟ ಸಹೋದ್ಯೋಗಿಗಳ ಸಾಮರ್ಥ್ಯದ ಬಗ್ಗೆಯೂ ಅವರು ಶಂಕೆಗಳನ್ನು ವ್ಯಕ್ತಪಡಿಸಿದ್ದಾರೆ.

ಆರ್ಥಿಕ ಸಾಧನೆಯ ವೈಫಲ್ಯವು ಬಿಜೆಪಿಯು ಲೋಕಸಭಾ ಚುನಾವಣೆಯಲ್ಲಿ ತನ್ನ ಪ್ರಚಾರ ವಿಷಯವನ್ನು ಬದಲಿಸುವಂತೆ ಮಾಡಿತ್ತು. ‘ವಿಕಾಸ್ (ಅಭಿವೃದ್ಧಿ)’ ಅನ್ನು ಮೂಲೆಗುಂಪು ಮಾಡಿದ ಬಿಜೆಪಿಯು ರಾಷ್ಟ್ರೀಯ ಭದ್ರತೆ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಟದಂತಹ ವಿಷಯಗಳನ್ನು ತನ್ನ ಚುನಾವಣಾ ಪ್ರಚಾರದ ಸರಕುಗಳನ್ನಾಗಿ ಮಾಡಿಕೊಂಡಿತ್ತು ಎಂದು ಸ್ವಾಮಿ ಕುಟುಕಿದ್ದಾರೆ.

2008ರಿಂದಲೂ ವಿದೇಶಿ ಹೂಡಿಕೆಯ ಬಗೆಗಿನ ಮೋಹವು ಆರ್ಥಿಕ ಹಿನ್ನಡೆಗೆ ಕಾರಣವಾಗಿತ್ತು ಎಂದಿರುವ ಸ್ವಾಮಿ, 2016ರಿಂದ ಆರ್ಥಿಕತೆಯು ಅಪಾಯಕಾರಿಯಾಗಿ ಹಿಮ್ಮುಖ ಗಿರಕಿ ಹೊಡೆದಿದ್ದು, ತನ್ನ ಸಲಹೆಗಳಿಗೆ ಕಿವಿಗೊಡದಿದ್ದರಿಂದ ದೇಶವೀಗ ಸಂಕಷ್ಟದ ಸ್ಥಿತಿಯಲ್ಲಿದೆ ಎಂದಿದ್ದಾರೆ.

ಮೋದಿ ಮತ್ತು ಅವರ ಪೂರ್ವಾಧಿಕಾರಿ ಮನಮೋಹನ ಸಿಂಗ್ ಅವರನ್ನು ತುಲನೆ ಮಾಡಿರುವ ಸ್ವಾಮಿ,ಸಿಂಗ್ ಆರ್ಥಿಕ ತಜ್ಞರಾಗಿದ್ದರು,ಆದರೆ ಅವರು ತನ್ನ ಸರಕಾರದಲ್ಲಿಯೇ ನಗಣ್ಯವಾಗಿದ್ದರು. ಮೋದಿಯವರು ಅವರ ತದ್ವಿರುದ್ಧವಾಗಿದ್ದಾರೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News