ಹಾಂಕಾಂಗ್: 9/11 ವಾರ್ಷಿಕ ದಿನದಂದು ಎಲ್ಲ ಪ್ರತಿಭಟನೆಗಳು ರದ್ದು

Update: 2019-09-11 16:52 GMT

ಹಾಂಕಾಂಗ್, ಸೆ. 11: 2001 ಸೆಪ್ಟಂಬರ್ 11ರಂದು ಅಮೆರಿಕದ ಮೇಲೆ ನಡೆದ ಭಯೋತ್ಪಾದಕ ದಾಳಿಯ ವಾರ್ಷಿಕ ದಿನವಾದ ಬುಧವಾರ ಹಾಂಕಾಂಗ್‌ನ ಪ್ರಜಾಪ್ರಭುತ್ವ ಪರ ಪ್ರತಿಭಟನಕಾರರು ತಮ್ಮೆಲ್ಲ ಪ್ರತಿಭಟನೆಗಳನ್ನು ರದ್ದುಪಡಿಸಿದ್ದಾರೆ. ಅದೇ ವೇಳೆ, ಹಾಂಕಾಂಗ್‌ನಲ್ಲಿ ‘ಬೃಹತ್ ಭಯೋತ್ಪಾದಕ ದಾಳಿ’ಯೊಂದನ್ನು ನಡೆಸಲು ಪ್ರಜಾಪ್ರಭುತ್ವ ಚಳವಳಿಗಾರರು ಸಂಚು ನಡೆಸಿದ್ದಾರೆ ಎಂಬ ಚೀನಾದ ಸರಕಾರಿ ಒಡೆತನದ ಪತ್ರಿಕೆ ‘ಚೀನಾ ಡೇಲಿ’ಯ ವರದಿಯೊಂದನ್ನು ತಿರಸ್ಕರಿಸಿದ್ದಾರೆ.

‘‘ಸರಕಾರ ವಿರೋಧಿಗಳು ಸೆಪ್ಟಂಬರ್ 11ರಂದು ಹಾಂಕಾಂಗ್‌ನಲ್ಲಿ ಅನಿಲ ಪೈಪ್‌ಗಳನ್ನು ಸ್ಫೋಟಿಸುವುದು ಸೇರಿದಂತೆ ಬೃಹತ್ ಭಯೋತ್ಪಾದಕ ದಾಳಿಗಳನ್ನು ನಡೆಸಲು ಉದ್ದೇಶಿಸಿದ್ದಾರೆ’’ ಎಂದು ‘ಚೀನಾ ಡೇಲಿ’ಯ ಹಾಂಕಾಂಗ್ ಆವೃತ್ತಿಯು ತನ್ನ ತನ್ನ ಫೇಸ್‌ಬುಕ್ ಪುಟದಲ್ಲಿ ಹೇಳಿದೆ. ಜೊತೆಗೆ 18 ವರ್ಷಗಳ ಹಿಂದೆ ನ್ಯೂಯಾರ್ಕ್‌ನ ಅವಳಿ ಗೋಪುರಗಳ ಮೇಲೆ ನಡೆದ ದಾಳಿಯ ಚಿತ್ರವೊಂದನ್ನು ಪ್ರಕಟಿಸಿದೆ.

‘‘ಸರಕಾರಿ ಮಾಧ್ಯಮಗಳು ತಮ್ಮ ವಿಶ್ವಾಸಾರ್ಹತೆಯ ಬಗ್ಗೆ ಯೋಚಿಸುವುದೇ ಇಲ್ಲ. ವಾಟ್ಸ್‌ಆ್ಯಪ್‌ನಲ್ಲಿ ಬಂದ ಅಥವ ಸ್ನೇಹಿತರ ಸ್ನೇಹಿತರಿಂದ ಕೇಳಿದ ಸುದ್ದಿಗಳನ್ನು ಅವುಗಳು ತಕ್ಷಣ ಹರಡಿಬಿಡುತ್ತವೆ’’ ಎಂದು ಪ್ರತಿಭಟನಕಾರರೊಬ್ಬರು ಹೇಳಿದರು.

‘‘ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಬೆಂಬಲ ನೀಡುವುದಕ್ಕಾಗಿ, ಹಾಡುವುದು ಮತ್ತು ಘೋಷಣೆಗಳನ್ನು ಕೂಗುವುದನ್ನು ಹೊರತುಪಡಿಸಿ ಇತರ ಎಲ್ಲ ವಿಧದ ಪ್ರತಿಭಟನೆಗಳನ್ನು ಸೆಪ್ಟಂಬರ್ 11ರಂದು ರದ್ದುಪಡಿಸಲಾಗಿದೆ’’ ಎಂದು ಪ್ರತಿಭಟನಕಾರರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News