ಬ್ರಿಟನ್: 2 ವರ್ಷಗಳ ‘ಶಿಕ್ಷಣೋತ್ತರ ಉದ್ಯೋಗ ವೀಸಾ’ ಯೋಜನೆ ಮರು ಜಾರಿ

Update: 2019-09-11 17:05 GMT

ವಿದೇಶಿ ವಿದ್ಯಾರ್ಥಿಗಳಿಗೆ 2 ವರ್ಷ ಕೆಲಸ ಮಾಡಲು ಅವಕಾಶ ನೀಡುವ ಲಂಡನ್, ಸೆ. 11: ಶಿಕ್ಷಣಕ್ಕಾಗಿ ಬ್ರಿಟನ್‌ಗೆ ಹೋಗುವ ವಿದ್ಯಾರ್ಥಿಗಳಿಗೆ ಶುಭ ಸುದ್ದಿಯೊಂದು ಇಲ್ಲಿದೆ. ಶಿಕ್ಷಣದ ಬಳಿಕ ಎರಡು ವರ್ಷ ಬ್ರಿಟನ್‌ ನಲ್ಲಿ ಕೆಲಸ ಮಾಡಲು ಅವಕಾಶ ಒದಗಿಸುವ ಎರಡು ವರ್ಷಗಳ ಶಿಕ್ಷಣೋತ್ತರ ಉದ್ಯೋಗ ವೀಸಾ ಯೋಜನೆಯನ್ನು ಮರುಜಾರಿಗೊಳಿಸುವುದಾಗಿ ಬ್ರಿಟನ್ ಸರಕಾರ ಬುಧವಾರ ಪ್ರಕಟಿಸಿದೆ. ಇದು ಪ್ರತಿಭಾವಂತ ವಿದೇಶಿ ವಿದ್ಯಾರ್ಥಿಗಳಿಗೆ ಬ್ರಿಟನ್‌ನಲ್ಲಿ ತಮ್ಮ ವೃತ್ತಿ ಜೀವನವನ್ನು ಯಶಸ್ವಿಯಾಗಿ ಆರಂಭಿಸಲು ಅವಕಾಶ ಕಲ್ಪಿಸಲಿದೆ.

2020-21ರ ಶೈಕ್ಷಣಿಕ ವರ್ಷದಲ್ಲಿ ಬ್ರಿಟನ್ ವಿಶ್ವವಿದ್ಯಾನಿಲಯಗಳಿಗೆ ಪ್ರವೇಶ ಪಡೆದುಕೊಳ್ಳುವ ವಿದೇಶಿ ವಿದ್ಯಾರ್ಥಿಗಳಿಗೆ ಈ ಯೋಜನೆ ಅನ್ವಯಿಸುತ್ತದೆ.

ಎರಡು ವರ್ಷಗಳ ಶಿಕ್ಷಣೋತ್ತರ ಉದ್ಯೋಗ ವೀಸಾವನ್ನು 2012ರಲ್ಲಿ ಅಂದಿನ ಗೃಹ ಕಾರ್ಯದರ್ಶಿ ತೆರೇಸಾ ಮೇ ರದ್ದುಪಡಿಸಿದ್ದರು. ಈ ಯೋಜನೆಗೆ ಮತ್ತೆ ಚಾಲನೆ ದೊರಕಿದ ಬಳಿಕ, ಶಿಕ್ಷಣಕ್ಕಾಗಿ ಬ್ರಿಟನ್‌ಗೆ ಹೋಗುವ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.

 ಈ ಯೋಜನೆಯು ಭಾರತ ಸೇರಿದಂತೆ ಎಲ್ಲ ದೇಶಗಳ ವಿದ್ಯಾರ್ಥಿಗಳಿಗೆ ಅನ್ವಯಿಸುತ್ತದೆ. ಈ ವಿದ್ಯಾರ್ಥಿಗಳು ಸರಿಯಾದ ಬ್ರಿಟನ್ ವಲಸಿಗ ವಿದ್ಯಾರ್ಥಿ ಸ್ಥಾನಮಾನ ಹೊಂದಿರಬೇಕು ಹಾಗೂ ಅಂಗೀಕೃತ ಬ್ರಿಟನ್ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸ್ನಾತಕ ಅಥವಾ ಅದಕ್ಕಿಂತ ಹೆಚ್ಚಿನ ಮಟ್ಟದ ಪದವಿಗಳಲ್ಲಿ ಯಾವುದೇ ವಿಷಯದ ಕುರಿತ ಕೋರ್ಸನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರಬೇಕು.

ಈ ವೀಸಾದ ಆಧಾರದಲ್ಲಿ, ಅರ್ಹ ವಿದೇಶಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಸಂಪೂರ್ಣಗೊಳಿಸಿದ ಬಳಿಕ, ತಮ್ಮ ಆಯ್ಕೆಯ ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡಬಹುದಾಗಿದೆ ಅಥವಾ ಕೆಲಸವನ್ನು ಹುಡುಕಬಹುದಾಗಿದೆ.

ಬ್ರೆಕ್ಸಿಟ್‌ಗೆ ಪೂರಕ ಯೋಜನೆ

 ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬಂದ (ಬ್ರೆಕ್ಸಿಟ್) ಬಳಿಕ, ದೇಶದಲ್ಲಿನ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸುವುದಕ್ಕಾಗಿ ಪ್ರಧಾನಿ ಬೊರಿಸ್ ಜಾನ್ಸನ್ ಈ ಯೋಜನೆಯನ್ನು ಮತ್ತೆ ಜಾರಿಗೊಳಿಸಿದ್ದಾರೆ.

ಅಕ್ಟೋಬರ್ 31ರಂದು ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವ ಕಾರ್ಯಕ್ರಮ ನಿಗದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News