ಐನ್‍ಸ್ಟೀನ್‍ ಗುರುತ್ವಾಕರ್ಷಣೆ ಅನ್ವೇಷಿಸಿದರು ಎಂದು ನಗೆಪಾಟಲಿಗೀಡಾದ ಕೇಂದ್ರ ಸಚಿವ ಗೋಯೆಲ್

Update: 2019-09-12 12:52 GMT

ಹೊಸದಿಲ್ಲಿ: ಆಟೋಮೊಬೈಲ್ ಕ್ಷೇತ್ರದ ಬಿಕ್ಕಟ್ಟಿಗೆ ಯುವಜನತೆ ಓಲಾ, ಉಬರ್ ಬಳಕೆಯನ್ನು ಹೆಚ್ಚು ಮಾಡಿರುವುದೇ ಕಾರಣ ಎಂದು ಹೇಳಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಟೀಕೆಗೆ ಒಳಗಾದ ಬೆನ್ನಲ್ಲೇ ಕೇಂದ್ರ ವಾಣಿಜ್ಯ ಸಚಿವ ಪಿಯುಷ್ ಗೋಯೆಲ್ ಅಷ್ಟೇ ವಿಚಿತ್ರ ಹೇಳಿಕೆಯನ್ನು ನೀಡಿದ್ದಾರೆ. 

"ನಾವು ಜಿಡಿಪಿ ಗಣಿತದ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು, ಗಣಿತ ಯಾವತ್ತೂ ಐನ್‍ಸ್ಟೀನ್‍ಗೆ ಗುರುತ್ವಾಕರ್ಷಣೆಯನ್ನು ಅನ್ವೇಷಿಸಲು ಸಹಾಯ ಮಾಡಿಲ್ಲ'' ಎಂದು ಗೋಯೆಲ್ ಹೇಳಿದ್ದಾರೆ. ಬೋರ್ಡ್ ಆಫ್ ಟ್ರೇಡ್ ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಗೋಯೆಲ್ ಮೇಲಿನ ಮಾತುಗಳನ್ನು ಹೇಳಿದ್ದಾರಲ್ಲದೆ ಮುಂದಿನ ಐದು ವರ್ಷಗಳಲ್ಲಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವ ನಿಟ್ಟಿನಲ್ಲಿ ದೇಶ ಸರಿಯಾದ ಹಾದಿಯಲ್ಲಿದೆ ಎಂದಿದ್ದಾರೆ. 

ಆದರೆ ಇಡೀ ವಿಶ್ವಕ್ಕೆ ಗೊತ್ತಿರುವಂತೆ ಗುರುತ್ವಾಕರ್ಷಣೆಯನ್ನು ಕಂಡು ಹಿಡಿದಿದ್ದು ನ್ಯೂಟನ್. ಗೋಯಲ್ ಮಾತ್ರ ಸರಕಾರವನ್ನು ಸಮರ್ಥಿಸುವ ಭರದಲ್ಲಿ ಏನೋ ಹೇಳಲು ಹೋಗಿ ಇನ್ನೇನೋ ಹೇಳಿ ನಗೆಪಾಟಲಿಗೀಡಾಗಿದ್ದಾರೆ.  ಈಗ ಜನ ಟ್ವಿಟರ್, ಫೇಸ್ ಬುಕ್ ಗಳಲ್ಲಿ ಕೇಂದ್ರ ಸಚಿವರ ಈ ಹೇಳಿಕೆಯನ್ನಿಟ್ಟುಕೊಂಡು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. 

"ಟಿವಿಯಲ್ಲಿ ತೋರಿಸಲಾಗುವ ಲೆಕ್ಕಾಚಾರಗಳನ್ನು ನಂಬಬೇಡಿ, ದೇಶ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಬೇಕಿದ್ದರೆ ನಾವು ಶೇ 12ರಷ್ಟು ಪ್ರಗತಿ  ಸಾಧಿಸಬೇಕಿದೆ ಹಾಗೂ ನಾವು ಈಗ ಶೇ 6-7ರಷ್ಟು ಪ್ರಗತಿ ಪ್ರಮಾಣ ದಾಖಲಿಸಿದ್ದೇವೆ, ಆ ಗಣಿತದ ಬಗ್ಗೆ ಚಿಂತಿಸಬೇಡಿ, ಆ ಗಣಿತ ಐನ್‍ಸ್ಟೀನ್‍ಗೆ ಗುರುತ್ವಾಕರ್ಷಣೆಯ ಶಕ್ತಿ ಪತ್ತೆ ಹಚ್ಚಲು ಯಾವತ್ತೂ ಸಹಾಯ ಮಾಡಿಲ್ಲ, ಅವರು ಅದಾಗಲೇ ಇದ್ದ ಸೂತ್ರಗಳು ಹಾಗೂ ಹಿಂದಿನ ಜ್ಞಾನವನ್ನೇ ನಂಬಿದ್ದರೆ ಜಗತ್ತಿನಲ್ಲಿ ಯಾವುದೇ ಆವಿಷ್ಕಾರಗಳು ನಡೆಯುತ್ತಿರಲಿಲ್ಲ ಎಂದು ನನ್ನ ಅನಿಸಿಕೆ,'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News