ಬಾಲಕಿಯರನ್ನು ಕುಟುಂಬಗಳಿಗೆ ಒಪ್ಪಿಸುವಂತೆ ಬಿಹಾರ ಸರಕಾರಕ್ಕೆ ಸುಪ್ರೀಂ ಆದೇಶ

Update: 2019-09-12 14:04 GMT

ಹೊಸದಿಲ್ಲಿ,ಸೆ.12: ನಿವಾಸಿಗಳ ಮೇಲಿನ ಅತ್ಯಾಚಾರದಿಂದ ಸುದ್ದಿಯಾಗಿದ್ದ ಮುಝಫ್ಫರ್‌ಪುರ ಆಶ್ರಯಧಾಮದಲ್ಲಿ ವಾಸವಾಗಿದ್ದ ಎಂಟು ಬಾಲಕಿಯರನ್ನು ಅವರ ಕುಟುಂಬಗಳಿಗೆ ಒಪ್ಪಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ವೋಚ್ಚ ನ್ಯಾಯಾಲಯವು ಗುರುವಾರ ಬಿಹಾರ ಸರಕಾರಕ್ಕೆ ಆದೇಶಿಸಿದೆ. ಬಾಲಕಿಯರಿಗೆ ಹಣಕಾಸು ಮತ್ತು ವೈದ್ಯಕೀಯ ನೆರವನ್ನು ಒದಗಿಸುವಂತೆಯೂ ಅದು ರಾಜ್ಯ ಸರಕಾರಕ್ಕೆ ನಿರ್ದೇಶ ನೀಡಿದೆ.

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಸಿ)ನ ಕೇತ್ರ ಕ್ರಿಯಾ ಯೋಜನೆ ‘ಕೋಶಿಶ್’ ಸಲ್ಲಿಸಿದ ಸ್ಥಿತಿಗತಿ ವರದಿಯನ್ನು ಪರಿಶೀಲಿಸಿದ ಬಳಿಕ ನ್ಯಾಯಾಲಯವು ಈ ನಿರ್ಧಾರವನ್ನು ಕೈಗೊಂಡಿತು. ಎಂಟು ಬಾಲಕಿಯರು ತಮ್ಮ ಕುಟುಂಬಗಳಿಗೆ ಮರಳಲು ಅರ್ಹ ಸ್ಥಿತಿಯಲ್ಲಿದ್ದಾರೆ ಎಂದು ಟಿಐಎಸ್‌ಸಿ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಬಾಲಕಿಯರಿಗೆ ನೀಡಬೇಕಾದ ಪರಿಹಾರವನ್ನು ನಿಗದಿಗೊಳಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ನ್ಯಾ.ಎನ್.ವಿ.ರಮಣ ನೇತೃತ್ವದ ಪೀಠವು ಬಿಹಾರ ಸರಕಾರಕ್ಕೆ ಆದೇಶಿಸಿತು. ಉಳಿದ 26 ಬಾಲಕಿಯರ ಕುರಿತು ಸ್ಥಿತಿಗತಿ ವರದಿಯನ್ನು ತಯಾರಿಸುವಂತೆ ಮತ್ತು ಎಂಟು ವಾರಗಳಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಪೀಠವು ಟಿಐಎಸ್‌ಸಿಗೆ ಸೂಚಿಸಿತು.

2018,ಎಪ್ರಿಲ್‌ನಲ್ಲಿ ಟಿಐಎಸ್‌ಸಿ ಬಿಹಾರದಲ್ಲಿಯ 110 ಆಶ್ರಯಧಾಮಗಳ ಆಡಿಟ್ ವರದಿಯನ್ನು ಸರಕಾರಕ್ಕೆ ಸಲ್ಲಿಸಿದಾಗ ಈ ಲೈಂಗಿಕ ಶೋಷಣೆ ಬೆಳಕಿಗೆ ಬಂದಿತ್ತು. 2018,ಮೇ ತಿಂಗಳಲ್ಲಿ ಸರಕಾರವು 11 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News