ಬಾಬರಿ ಮಸೀದಿ ಧ್ವಂಸ ಪ್ರಕರಣ: ನ್ಯಾ. ಯಾದವ್ ಅಧಿಕಾರಾವಧಿ ವಿಸ್ತರಣೆ

Update: 2019-09-13 17:15 GMT

ಲಕ್ನೊ, ಸೆ.13: ಬಾಬರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ಸುರೇಂದ್ರ ಕುಮಾರ್ ಯಾದವ್ ಅವರ ಅಧಿಕಾರಾವಧಿಯನ್ನು ವಿಚಾರಣೆ ಮುಕ್ತಾಯಗೊಳ್ಳುವವರೆಗೆ ವಿಸ್ತರಿಸಲಾಗಿದೆ ಎಂದು ಉತ್ತರಪ್ರದೇಶ ಸರಕಾರ ಸುಪ್ರೀಂಕೋರ್ಟ್ಗೆ ತಿಳಿಸಿದೆ. ನ್ಯಾ. ಯಾದವ್ ಸೆಪ್ಟೆಂಬರ್ 30ರಂದು ನಿವೃತ್ತಿ ಹೊಂದಲಿದ್ದಾರೆ. ಬಾಬರಿ ಮಸೀದಿ ಪ್ರಕರಣದ ವಿಚಾರಣೆ ಮುಗಿಸಲು ತನಗೆ ಹೆಚ್ಚಿನ ಸಮಯ ನೀಡುವಂತೆ ಜುಲೈಯಲ್ಲಿ ನ್ಯಾ. ಯಾದವ್ ಸುಪ್ರೀಂಕೋರ್ಟ್ಗೆ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ, ನ್ಯಾ. ಯಾದವ್ ಅಧಿಕಾರಾವಧಿ ವಿಸ್ತರಿಸುವಂತೆ ಅದೇ ತಿಂಗಳಿನಲ್ಲಿ ಸುಪ್ರೀಂಕೋರ್ಟ್ ಉತ್ತರ ಪ್ರದೇಶ ಸರಕಾರಕ್ಕೆ ಸೂಚಿಸಿತ್ತು. ಆದರೆ ಸರಕಾರದಿಂದ ಇದುವರೆಗೆ ಪ್ರತಿಕ್ರಿಯೆ ಬಂದಿರಲಿಲ್ಲ. ಆದಿತ್ಯನಾಥ್ ಸರಕಾರದ ಆದೇಶವನ್ನು ಶುಕ್ರವಾರ ನ್ಯಾಯಪೀಕ್ಕೆ ಸಲ್ಲಿಸಲಾಯಿತು. ಸುಪ್ರೀಂಕೋರ್ಟ್ನ ಆದೇಶದಂತೆ ನ್ಯಾಯಾಧೀಶರ ಅಧಿಕಾರಾವಧಿ ವಿಸ್ತರಿಸಲಾಗಿದೆ ಎಂದು ಸರಕಾರದ ವಕೀಲರು ತಿಳಿಸಿದರು. ಅಗತ್ಯಕ್ರಮ ಕೈಗೊಂಡಿರುವುದು ಮನದಟ್ಟಾಗಿದೆ ಎಂದು ತಿಳಿಸಿದ ನ್ಯಾಯಪೀಠ, ಕಾಲಮಿತಿಯೊಳಗೆ ತೀರ್ಪು ನೀಡಬೇಕೆಂಬ ಏಕೈಕ ಉದ್ದೇಶದಿಂದ ಅಧಿಕಾರ ವಿಸ್ತರಿಸಲಾಗಿದೆ. ವಿಸ್ತರಿತ ಅಧಿಕಾರಾವಧಿಯಲ್ಲಿ ಯಾದವ್ ಅವರು ಅಲಹಾಬಾದ್ ಹೈಕೋರ್ಟ್ನ ಆಡಳಿತಾತ್ಮಕ ನಿಯಂತ್ರಣದಲ್ಲಿರುತ್ತಾರೆ ಎಂದು ತಿಳಿಸಿದೆ. ಬಾಬರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ 9 ತಿಂಗಳೊಳಗೆ ಪೂರ್ಣಗೊಳ್ಳಬೇಕೆಂದು ಜುಲೈ 19ರಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಪ್ರಕರಣದಿಂದ ಖುಲಾಸೆಗೊಂಡಿದ್ದ ಬಿಜೆಪಿ ಮುಖಂಡರಾದ ಎಲ್ಕೆ ಅಡ್ವಾಣಿ, ಮುರಳಿ ಮನೋಹರ ಜೋಷಿ ಹಾಗೂ ಇತರ ಹಲವು ಹಿಂದು ಮುಖಂಡರ ವಿರುದ್ಧದ ಕ್ರಿಮಿನಲ್ ಒಳಸಂಚು ಆರೋಪವನ್ನು ಸುಪ್ರೀಂ ಮರುಸ್ಥಾಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News