ಕಾಶ್ಮೀರಿಗಳು ಬೀದಿಗಿಳಿದರೆ ಸರಕಾರ ಸಾಮೂಹಿಕ ಮಾರಣಹೋಮ ನಡೆಸಲು ತಯಾರಾಗಿದೆ

Update: 2019-09-15 11:34 GMT

ಆ.5ರಂದು ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂದೆಗೆದುಕೊಳ್ಳುವ ಮುನ್ನ ಕೇಂದ್ರ ಸರಕಾರವು ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ಹಲವಾರು ರಾಜಕಾರಣಿಗಳನ್ನು ಬಂಧಿಸಿತ್ತು. ಇವರಲ್ಲಿ ಕೆಲವರು ಜೈಲಿನಲ್ಲಿದ್ದರೆ, ಇನ್ನು ಕೆಲವರು ಗೃಹಬಂಧನದಲ್ಲಿದ್ದಾರೆ. ಆದರೆ ಪಿಡಿಪಿಯ ಸ್ಥಾಪಕ ಸದಸ್ಯರಾಗಿದ್ದ ಹಾಗೂ ಈಗ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರಾಗಿರುವ 64ರ ಹರೆಯದ ತಾರಿಕ್ ಹಮೀದ್ ಕರ್ರಾ ಅವರು ಬಂಧನದಿಂದ ಪಾರಾಗುವಲ್ಲಿ ಸಫಲರಾಗಿದ್ದರು. ಸದ್ಯ ಅವರು ಭೂಗತರಾಗಿದ್ದಾರೆ.

“ನಾನು ಜಮ್ಮು-ಕಾಶ್ಮೀರಕ್ಕೆ ರಹಸ್ಯವಾಗಿ ಮರಳಿದ್ದೆ ಮತ್ತು ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿ, ಭದ್ರತಾ ಪಡೆಗಳು ಸಾಮೂಹಿಕ ಹತ್ಯೆಗಳಿಗೆ ಸಿದ್ಧವಾಗಿರುವುದರಿಂದ ಯಾವುದೇ ಪ್ರತೀಕಾರದ ಕ್ರಮಕ್ಕೆ ಮುಂದಾಗದಂತೆ ಜನರನ್ನು ಆಗ್ರಹಿಸಿದ್ದೇನೆ” ಎಂದು ಕರ್ರಾ ರಹಸ್ಯ ತಾಣದಿಂದ ಸುದ್ದಿ ಜಾಲತಾಣ ‘ಹಫ್ ಪೋಸ್ಟ್ ಇಂಡಿಯಾ’ಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ. ಅವರೊಂದಿಗೆ ನಡೆಸಿದ ಸಂದರ್ಶನದ ಕೆಲವು ಆಯ್ದ ಭಾಗಗಳಿಲ್ಲಿವೆ:

► ಕಾಶ್ಮೀರಿ ರಾಜಕಾರಣಿಗಳು, ಮುಖ್ಯವಾಹಿನಿ ರಾಜಕಾರಣಿಗಳು ಬಂಧಿಸಲ್ಪಟ್ಟಿದ್ದಾರೆ ಇಲ್ಲವೇ ಗೃಹಬಂಧನದಲ್ಲಿದ್ದಾರೆ. ಆದರೆ ನೀವು ಹೊರಗಿದ್ದೀರಿ ಹೇಗೆ?

ಆ.2ರಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಜಮ್ಮು-ಕಾಶ್ಮೀರ ನೀತಿ ಯೋಜನಾ ಸಮಿತಿಯ ಸಭೆಯನ್ನು ಕರೆಯಲಾಗಿತ್ತು. ಇದರಲ್ಲಿ ಪಾಲ್ಗೊಳ್ಳಲೆಂದು ನಾನು ದಿಲ್ಲಿಗೆ ತೆರಳಿದ್ದ ಮರುದಿನವೇ ರಾಜ್ಯದಲ್ಲಿ ರಾಜಕೀಯ ನಾಯಕರನ್ನು, ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ನನ್ನ ವಿರುದ್ಧ ಗೃಹಬಂಧನದ ಆದೇಶವಿದೆ ಎಂದು ಶ್ರೀನಗರದಲ್ಲಿಯ ನನ್ನ ನಿವಾಸದಲ್ಲಿದ್ದವರಿಗೆ ಅಧಿಕಾರಿಗಳು ತಿಳಿಸಿದ್ದರು. ಆ ಸಂದರ್ಭದಲ್ಲಿ ನಾನೊಬ್ಬನೇ ರಾಜ್ಯದಿಂದ ಹೊರಗಿದ್ದೆ ಮತ್ತು ಇದೇ ಕಾರಣದಿಂದ ನನ್ನ ಬಂಧನ ಸಾಧ್ಯವಾಗಲಿಲ್ಲ. ಇದು ಆ.2-3ರ ಮಾತು. ಆ.4ರಂದು ಮೆಹಬೂಬಾ ಮುಫ್ತಿ ಮತ್ತು ಒಮರ್ ಅಬ್ದುಲ್ಲಾರನ್ನು ಗೃಹಬಂಧನದಲ್ಲಿರಿಸಲಾಗಿತ್ತು. ವಾಸ್ತವದಲ್ಲಿ ಆ.1ರಿಂದಲೇ ತಳಮಟ್ಟದ ರಾಜಕೀಯ ಕಾರ್ಯಕರ್ತರ ಬಂಧನ ಆರಂಭಗೊಂಡಿತ್ತು.

►ನೀವು ಕಾಶ್ಮೀರಕ್ಕೆ ಮರಳಿದ್ದು ಯಾವಾಗ?

ಆ.12ರಂದು ದಿಲ್ಲಿಯಿಂದ ಕಾಶ್ಮೀರಕ್ಕೆ ಪ್ರಯಾಣಿಸಿದ್ದ ನಾನು ಆ.31ರಂದು ದಿಲ್ಲಿಗೆ ವಾಪಸಾಗಿದ್ದೆ. ಕಾಶ್ಮೀರದಲ್ಲಿದ್ದ 18 ದಿನಗಳ ಅವಧಿಯಲ್ಲಿ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಜನರೊಂದಿಗೆ ಸಭೆಗಳನ್ನು ನಡೆಸಿದ್ದೆ. ನನ್ನ ಕಾಶ್ಮೀರ ಭೇಟಿ ಅತ್ಯಂತ ರಹಸ್ಯವಾಗಿತ್ತು. ನನ್ನ ಅಭಿಪ್ರಾಯದಂತೆ ಕಾಶ್ಮೀರಿಗಳು ಯಾವುದೇ ಪ್ರತೀಕಾರಕ್ಕೆ ಮುಂದಾಗದಿರುವುದು ಭಾರತ ಸರಕಾರವನ್ನು ಅಚ್ಚರಿಯಲ್ಲಿ ಕೆಡವಿದೆ. ಏಕೆಂದರೆ ಪ್ರತೀಕಾರವನ್ನು ಎದುರಿಸಲು ಅದು ಸಂಪೂರ್ಣ ಸಜ್ಜಾಗಿತ್ತು.

►ಆದರೆ ಅಲ್ಲಿ ಪ್ರತಿಭಟನೆಗಳು ನಡೆದಿದ್ದವಲ್ಲ?

ಪ್ರತೀಕಾರವೆಂದರೆ ಕಲ್ಲುತೂರಾಟ ಇತ್ಯಾದಿಗಳಲ್ಲ. ಅಲ್ಲಿ ಸಾಮೂಹಿಕ ಹತ್ಯೆಗಳನ್ನು ಅವರು ನಿರೀಕ್ಷಿಸಿದ್ದರು. ನನ್ನ ಮೂಲಗಳು ನೀಡಿದ್ದ ಮಾಹಿತಿಗಳು ಸರಿಯಾಗಿದ್ದರೆ ಕಾಶ್ಮೀರಿಗಳು ಪ್ರತೀಕಾರಕ್ಕಾಗಿ ಬೀದಿಗಿಳಿದಿದ್ದರೆ ಸಾವಿರಾರು ಜನರ ಮಾರಣಹೋಮ ನಡೆಯುತ್ತಿತ್ತು. ಆದರೆ ಪ್ರತೀಕಾರಗಳೇ ಇಲ್ಲದಿದ್ದುದು ಅವರನ್ನು ಅಚ್ಚರಿಯಲ್ಲಿ ಕೆಡವಿದೆ. ನೀವು ಪ್ರತೀಕಾರಕ್ಕಿಳಿಯಬೇಕೆಂದು ಅವರು ಬಯಸಿದ್ದಾರೆ, ಹೀಗಾಗಿ ಅಂತಹ ಕ್ರಮಕ್ಕೆ ಮುಂದಾಗಬೇಡಿ ಎಂದು ಜನರಿಗೆ ತಿಳಿಸಿ ಹೇಳುವುದು ನನ್ನ ಗುರಿಯಾಗಿತ್ತು. ನಿಮ್ಮನ್ನು ಹೈರಾಣಾಗಿಸಲು ಅವರು ಬಯಸಿದ್ದಾರೆ, ಆದರೆ ಅವರನ್ನು ನಾವು ಹೇಗೆ ಹೈರಾಣಾಗಿಸಬಹುದು ಎನ್ನುವುದನ್ನು ನೋಡೋಣ ಎಂದು ಜನರಿಗೆ ನಾನು ಕಿವಿಮಾತು ಹೇಳಿದ್ದೇನೆ.

►ಎಂತಹ ಪ್ರತೀಕಾರಗಳಿಗೆ ಸರಕಾರವು ಸಜ್ಜಾಗಿತ್ತು?

ಹತ್ಯೆಗಳು ನೂರಾರು ಅಲ್ಲ, ಸಾವಿರಾರು ಸಂಖ್ಯೆಯಲ್ಲಿ ನಡೆಯುತ್ತಿದ್ದವು. ವಿವೇಚನೆಯುಳ್ಳ ಯಾವುದೇ ವ್ಯಕ್ತಿಯು ಇದನ್ನು ಅಂದಾಜಿಸಬಲ್ಲ. ಅದಾಗಲೇ ರಾಜ್ಯದಲ್ಲಿ ಏಳು ಲಕ್ಷ ಭದ್ರತಾ ಸಿಬ್ಬಂದಿಯಿದ್ದರು. ನಂತರ 1,80,000 ಮತ್ತು 50,000 ಸೈನಿಕರನ್ನು ಎರಡು ಕಂತುಗಳಲ್ಲಿ ರಾಜ್ಯಕ್ಕೆ ರವಾನಿಸಿರುವುದಾಗಿ ಸರಕಾರವು ತಿಳಿಸಿತ್ತು. ಅದು ಬೃಹತ್ ಪ್ರತೀಕಾರವನ್ನು ನಿರೀಕ್ಷಿಸಿತ್ತು ಮತ್ತು ಅದನ್ನು ದಮನಿಸಲು ವ್ಯಾಪಕ ಸಿದ್ಧತೆಗಳನ್ನು ಮಾಡಿಕೊಂಡಿತ್ತು.

► ಸರಕಾರವು ಸದ್ಯ ನಿಮ್ಮನ್ನು ಬಂಧಿಸಲು ಪ್ರಯತ್ನಿಸುತ್ತಿದೆ?

ಹೌದು,ಜಮ್ಮು-ಕಾಶ್ಮೀರ ಸರಕಾರವು ನನ್ನನ್ನು ಬೇಟೆಯಾಡುತ್ತಿದೆ.

► ಅಂದರೆ ನೀವು ಈಗ ಭೂಗತರಾಗಿದ್ದೀರಿ?

ಅದನ್ನೇ ನಾನು ನಿಮಗೆ ಹೇಳುತ್ತಿದ್ದೇನೆ.

►ನೀವು ಆನ್ ರೆಕಾರ್ಡ್ ಸಂದರ್ಶನ ನೀಡುತ್ತಿದ್ದೀರಿ ಮತ್ತು ನೀವು 18 ದಿನಗಳ ಕಾಲ ಜಮ್ಮು-ಕಾಶ್ಮೀರದಲ್ಲಿ ಇದ್ದುದ್ದಾಗಿ ಹೇಳುತ್ತಿದ್ದೀರಿ. ಸರಕಾರವು ನಿಮ್ಮ ಬೆನ್ನಿಗೆ ಬೀಳುವ ಅಪಾಯಕ್ಕೆ ನಿಮ್ಮನ್ನೊಡ್ಡಿಕೊಳ್ಳುತ್ತಿದ್ದೀರಾ?

ಅವರು ಈಗಾಗಲೇ ನನ್ನ ಬೆನ್ನ ಹಿಂದೆ ಬಿದ್ದಿದ್ದಾರೆ. ಅಪಾಯಕ್ಕಿಂತ ಹೋರಾಟ ಮುಖ್ಯ ಎನ್ನುವುದು ನನ್ನ ನಂಬಿಕೆ

►ಆದರೆ ಮಾಧ್ಯಮದೊಂದಿಗೆ ಮಾತನಾಡುವುದು ನಿಮಗೆ ಅಪಾಯವನ್ನು ಹೆಚ್ಚಿಸುತ್ತದೆ

ಹಾಗಾದರೆ ಯಾರು ಮಾತನಾಡಬೇಕು?, ನಾನೊಬ್ಬನೇ ಈಗ ಹೊರಗುಳಿದಿರುವ ಮುಖ್ಯವಾಹಿನಿ ನಾಯಕನಾಗಿದ್ದೇನೆ. ನನಗೆ ಜವಾಬ್ದಾರಿಯಿದೆ. ರಾಜಕಾರಣವು ನನಗೆ ಅಥವಾ ನನ್ನ ಕುಟುಂಬಕ್ಕೆ ವೃತ್ತಿಯಲ್ಲ. ಓರ್ವ ಜವಾಬ್ದಾರಿಯುತ ಪ್ರಜೆಯಾಗಿ, ಆತ್ಮಪ್ರಜ್ಞೆಯುಳ್ಳ ಕಾಶ್ಮೀರಿಯಾಗಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟಗಳಲ್ಲಿ ಇವೆಲ್ಲ ವಿಷಯಗಳು ಹೊರಬರಬೇಕೆಂದು ನಾನು ಪ್ರಾಮಾಣಿಕವಾಗಿ ಭಾವಿಸಿದ್ದೇನೆ.

►ಜಮ್ಮು-ಕಾಶ್ಮೀರಕ್ಕೆ ವಾಪಸಾಗುವಾಗ ನಿಮ್ಮನ್ನು ಭೀತಿ ಕಾಡುತ್ತಿತ್ತೇ?

ಭೀತಿಯಿರಲಿಲ್ಲ, ಆದರೆ ನನ್ನನ್ನು ವಶಕ್ಕೆ ತೆಗೆದುಕೊಂಡರೆ ನನ್ನನ್ನು ಬೇರೆ ರಾಜ್ಯದ ಜೈಲಿಗೆ ರವಾನಿಸಬಹುದೆಂಬ ಆತಂಕವಿತ್ತು. ಆದರೆ ಜನರನ್ನು ತಲುಪುವುದು, ಪ್ರತೀಕಾರಕ್ಕೆ ಇಳಿಯದಂತೆ ಅವರಿಗೆ ತಿಳುವಳಿಕೆ ಮೂಡಿಸುವುದು ನನಗೆ ಮುಖ್ಯವಾಗಿತ್ತು. ಅಲ್ಲಿಯ ವ್ಯವಸ್ಥೆ ಹೇಗಿದೆಯೆಂದರೆ ತಾವು ಹೊರಗೆ ಬಂದರೆ ಗುಂಡಿಗೆ ಬಲಿಯಾಗುತ್ತೇವೆ ಎನ್ನುವುದು ಜನರಿಗೆ ಚೆನ್ನಾಗಿ ಗೊತ್ತಿದೆ. ಆದರೆ ಯುವಜನರಂತಹ ಸಮಾಜದ ವರ್ಗವೊಂದಿದೆ ಮತ್ತು ಇನ್ನೂ ಉಪದೇಶ ಕೇಳುತ್ತಿರಲು ಸಿದ್ಧರಿಲ್ಲ. ಯುವಜನರು ತಮ್ಮ ಮಾತು ಕೇಳುತ್ತಿಲ್ಲ ಎಂದು ಸ್ಥಳೀಯರ ಮೇಲೆ ಪ್ರಭಾವ ಹೊಂದಿದ ಮುಖಂಡರೂ ಹೇಳುತ್ತಾರೆ. ಕೊನೆಯ ಯುದ್ಧವನ್ನು ಹೋರಾಡೋಣ ಎಂದು ಯುವಜನರು ಹೇಳುತ್ತಿದ್ದಾರೆ. ಆದರೆ ಹೀಗೆ ಹೋರಾಡಬೇಕಾದ ಕೊನೆಯ ಯುದ್ಧ ಯಾವುದೂ ಇಲ್ಲ, ನಮ್ಮ ಯುವಕರು ಉಳಿಯುವುದು ನಮಗೆ ಅಗತ್ಯವಾಗಿದೆ ಎಂದು ನಾನು ಅವರಿಗೆ ತಿಳಿಸಿ ಹೇಳಿದೆ. ಜೀವ ಮತ್ತು ಆಸ್ತಿ ರಕ್ಷಣೆಯಾಗಬೇಕು ಎನ್ನುವುದು ನನ್ನ ಉದ್ದೇಶವಾಗಿತ್ತು.

► ನೀವು ಸಿಕ್ಕಿಬೀಳುವ ಸಂದರ್ಭಗಳು ಎದುರಾಗಿದ್ದವೇ?

ಕೆಲವು ಸಲ. ಒಂದು ಸಲವಂತೂ ಅದೃಷ್ಟ ಬಲದಿಂದ ಪಾರಾಗಿದ್ದೆ. ದಿಲ್ಲಿಯಿಂದ ಬಂದಿದ್ದ ವ್ಯಾಪಾರಿಯ ಸೋಗು ಹಾಕಿದ್ದೆ ಮತ್ತು ಭದ್ರತಾ ಸಿಬ್ಬಂದಿಯೊಂದಿಗೆ ದಿಲ್ಲಿಯ ಉಚ್ಚಾರಣೆಯಲ್ಲಿ ಮಾತನಾಡಿದ್ದೆ,ಸಾಮಾನ್ಯವಾಗಿ ನನ್ನ ಉಚ್ಚಾರಣೆ ಕಾಶ್ಮೀರಿಯಂತಿಲ್ಲ ಮತ್ತು ಅದೇ ನನ್ನನ್ನು ರಕ್ಷಿಸಿದ್ದು.

► ಸಾರ್ವಜನಿಕ ಪ್ರತೀಕಾರ ಮತ್ತು ಉಗ್ರರ ಪ್ರತೀಕಾರದ ನಡುವೆ ವ್ಯತ್ಯಾಸವೇನು?

 ಉಗ್ರರ ಪ್ರತೀಕಾರದ ಬಗ್ಗೆ ನಾನು ಮಾತನಾಡುವುದಿಲ್ಲ. ನಾನು ಸಾರ್ವಜನಿಕ ಪ್ರತೀಕಾರದ ಬಗ್ಗೆ ಮಾತನಾಡುತ್ತೇನೆ. ಜನರಲ್ಲಿಯ ನಿಜವಾದ ನೋವು ಪ್ರತಿಭಟನೆಗಳ ರೂಪವನ್ನು ಪಡೆದುಕೊಂಡಿದೆ. ಉಗ್ರವಾದದ ಬೆನ್ನು ಮುರಿಯಲು ನೋಟು ರದ್ದತಿಯನ್ನು ಮಾಡಲಾಗಿತ್ತು ಎಂದು ಸರಕಾರವು ಹೇಳುತ್ತಿದೆ ಮತ್ತು ಇದೇ ಸರಕಾರವು ಜಮ್ಮು-ಕಾಶ್ಮೀರದಲ್ಲಿ ಕೇವಲ ಶೇ.5ರಷ್ಟು ದುಷ್ಕರ್ಮಿಗಳಿದ್ದಾರೆ ಎಂದು ಹೇಳುತ್ತಿದೆ. ಕೇವಲ ಶೇ.5ರಷ್ಟು ದುಷ್ಕರ್ಮಿಗಳನ್ನು ನಿಯಂತ್ರಿಸಲು ಅಷ್ಟೊಂದು ಭದ್ರತಾ ಪಡೆಗಳು ಅಲ್ಲಿವೆಯೇ?, ಇಂದು ಕಾಶ್ಮೀರದಲ್ಲಿ ಪ್ರತಿ ಎಂಟು ನಾಗರಿಕರಿಗೆ ಓರ್ವ ಸಶಸ್ತ್ರ ಯೋಧನಿದ್ದಾನೆ. ನೀವು ಬಂದೂಕಿನ ಬೆದರಿಕೆಯೊಡ್ಡಿ ಜನರನ್ನು ಹಿಡಿದಿಡಲು ಬಯಸಿರಬಹುದು, ಅದು ಬೇರೆ ವಿಷಯ. ಆದರೆ ಇದಕ್ಕಾಗಿ ಜಮ್ಮು-ಕಾಶ್ಮೀರದ ಜನರು ಭಾರತದೊಂದಿಗೆ ವಿಲೀನಗೊಂಡಿರಲಿಲ್ಲ. ಮುಸ್ಲಿಂ ಬಹುಸಂಖ್ಯಾಕ ರಾಜ್ಯವಾಗಿ ನಾವು ಪಾಕಿಸ್ತಾನದಲ್ಲಿ ವಿಲೀನಗೊಳ್ಳಬೇಕು ಎಂಬ ಕೂಗುಗಳು ಎದ್ದಿದ್ದವಾದರೂ ಜಮ್ಮು-ಕಾಶ್ಮೀರವು ಜಾತ್ಯತೀತ ದೇಶದಲ್ಲಿ ವಿಲೀನಗೊಂಡಿತ್ತು. ಅದಕ್ಕಾಗಿ ನಮ್ಮನ್ನು ದಂಡಿಸಲಾಗುತ್ತಿದೆಯೇ?, ಅದಕ್ಕಾಗಿ ನಮ್ಮನ್ನು ಪುರಸ್ಕರಿಸಲಾಗುತ್ತಿದೆಯೇ?, ನಾವು ಭಾರತೀಯ ಸಂವಿಧಾನದ ಧ್ವಜಧಾರಕರಾಗಿದ್ದೆವು. ಹೆಚ್ಚೆಚ್ಚು ಕಾಶ್ಮೀರಿಗಳು ಸರಕಾರದ ಪರವಾಗಿ ಮಾತನಾಡಲು ಸಿದ್ಧರಿದ್ದಾರೆ,ಆದರೆ ಉಗ್ರರ ಭೀತಿಯಿಂದಾಗಿ ಅವರು ತೆಪ್ಪಗಿದ್ದಾರೆ ಎಂದು ಹೇಳುತ್ತಿರುವ ಜನರೂ ಇದ್ದಾರೆ. ಇದರಲ್ಲಿ ಏನಾದರೂ ಸತ್ಯ ನಿಮಗೆ ಕಂಡು ಬರುತ್ತಿದೆಯೇ? ನನಗಂತೂ ಹಾಗೆ ಕಂಡು ಬರುತ್ತಿಲ್ಲ. ದಿಲ್ಲಿಯಲ್ಲಿ ಗೃಹಸಚಿವಾಲಯದಲ್ಲಿ ಕುಳಿತಿರುವವರು ಇಂತಹ ಕಥೆಗಳನ್ನು ಕಟ್ಟುತ್ತಿದ್ದಾರೆ.

ಇಂದು ಜಮ್ಮುವಿನಲ್ಲಿಯೂ ಅಸಮಾಧಾನ ತಾಂಡವವಾಡುತ್ತಿದೆ. ತಮಗೆ ವಿಧಿ 370 ಯಾವುದರಿಂದ ರಕ್ಷೆ ನೀಡಿತ್ತು ಎನ್ನುವುದು ಅವರಿಗೆ ಈಗ ಗೊತ್ತಾಗಿದೆ.

ಒಂದು ವಿಷಯವನ್ನು ಹೇಳಿ. ಜಮ್ಮು-ಕಾಶ್ಮೀರವನ್ನೇ ಏಕೆ ಗುರಿಯಾಗಿಸಿಕೊಳ್ಳಲಾಗಿದೆ?, ರಾಜ್ಯದ ವಿಶೇಷ ಸ್ಥಾನಮಾನ ಇಡೀ ದೇಶವನ್ನು ಅಥವಾ ನಿರ್ದಿಷ್ಟವಾಗಿ ಒಂದು ವರ್ಗದ ಜನರನ್ನು ಮಾತ್ರ ಏಕೆ ಕಾಡುತ್ತಿತ್ತು?, ಇತರ ರಾಜ್ಯಗಳೂ ಇಂತಹುದೇ ವಿಶೇಷ ಸ್ಥಾನಮಾನಗಳನ್ನು ಅನುಭವಿಸುತ್ತಿಲ್ಲವೇ?, ಹಿಮಾಚಲ ಪ್ರದೇಶ ಮತ್ತು ಈಶಾನ್ಯ ರಾಜ್ಯಗಳು. ಹಿಮಾಚಲ ಪ್ರದೇಶದಲ್ಲಿ ನೀವು ಹೊರಗಿನವರಾಗಿ ಭೂಮಿಯನ್ನು ಖರೀದಿಸುವಂತಿಲ್ಲ. ಹೀಗಿದ್ದಾಗ ಜಮ್ಮು-ಕಾಶ್ಮೀರ ನಿರ್ದಿಷ್ಟ ವರ್ಗದ ಜನರಿಗೆ ಹೇಗೆ ತೊಂದರೆಯನ್ನುಂಟು ಮಾಡುತ್ತಿತ್ತು?

ಅವರಿಗೆ (ಸರಕಾರ) ಕಾಶ್ಮೀರಿಗಳನ್ನು ದುರ್ಬಲಗೊಳಿಸುವುದಷ್ಟೇ ಬೇಕಿದೆ. ಅವರ ಮನಃಸ್ಥಿತಿ ಕಾಶ್ಮೀರಿಗಳ ವಿರುದ್ಧವಾಗಿದೆ. ಕಾಶ್ಮೀರಿಗಳೊಂದಿಗೆ ಮಾತ್ರ ಅವರಿಗೆ ಸಮಸ್ಯೆಯಿದೆ.

► ಕಾಶ್ಮೀರಿಗಳಲ್ಲಿ ಬಹುಸಂಖ್ಯಾತರು ಮುಸ್ಲಿಮರು ಎಂಬ ಕಾರಣಕ್ಕಾಗಿಯೇ?

ಹಿಂದುತ್ವ ಕಾಶ್ಮೀರದಲ್ಲಿ ಹುಟ್ಟಿದ್ದು ಎಂಬ ತಪ್ಪು ಕಲ್ಪನೆಯನ್ನು ಕೆಲ ಸಮಯದಿಂದ ಅವರು ಜನರಲ್ಲಿ ಬಿತ್ತುತ್ತಿದ್ದಾರೆ ಮತ್ತು ಹಿಂದುತ್ವ ಕಾಶ್ಮೀರದಲ್ಲಿ ಆರಂಭಗೊಂಡಿತ್ತು ಎನ್ನುವುದನ್ನು ನಾವು ಮರುಶೋಧಿಸಬೇಕಾಗಿದೆ. ಬಹುಸಂಖ್ಯಾತರ ಈ ಹೊಸ ಕಥನ ಭಾರತಕ್ಕೆ ಒಳ್ಳೆಯದಲ್ಲ. ನಾನು ಎರಡನೇ ದರ್ಜೆಯ ಪ್ರಜೆಯಾಗಿದ್ದೇನೆ ಮತ್ತು ನಾನು ನಿಮ್ಮ ಕೃಪಾಶ್ರಯದಲ್ಲಿದ್ದೇನೆ ಎಂಬ ಭಾವನೆಯನ್ನು ನನ್ನಲ್ಲಿ ಮೂಡಿಸಲಾಗಿದೆ. ಗಾಂಧೀಜಿಯವರು ಬಲಿದಾನ ಮಾಡಿದ್ದು ಯಾವುದಕ್ಕೆ?, ಸಾವಿರಾರು ಜನರು ಹುತಾತ್ಮರಾಗಿದ್ದು ಯಾವುದಕ್ಕಾಗಿ? ‘ಇನ್‌ಕ್ರೆಡಿಬಲ್ ಇಂಡಿಯಾ ’ಘೋಷಣೆ ಈಗ ‘ಇನ್‌ ಟಾಲರೇಬಲ್ ಇಂಡಿಯಾ ’ ಮಟ್ಟಕ್ಕಿಳಿದಿದೆ. ನಿಮಗೆ ಹಾಗೆನಿಸುತ್ತಿಲ್ಲವೇ?

► ವಿಧಿ 370ರ ರದ್ದತಿ ನಿಮ್ಮಂತಹ ಮುಖ್ಯವಾಹಿನಿ ರಾಜಕಾರಣಿಗಳ ಪಾಲಿಗೆ ಯಾವ ಅರ್ಥವನ್ನು ಸೂಚಿಸುತ್ತಿದೆ?

ನನಗೆ ಅವಹೇಳನವಾಗಿದೆ, ನನ್ನನ್ನು ವಂಚಿಸಲಾಗಿದೆ ಎಂದು ಇಂದು ನನಗನ್ನಿಸುತ್ತಿದೆ. ವಿಧಿ 370 ನನಗೆ, ಭಾರತದ ಧ್ವಜವನ್ನು, ಭಾರತೀಯ ಸಂವಿಧಾನವನ್ನು ಎತ್ತಿ ಹಿಡಿಯುತ್ತಿದ್ದ ಜನರ ಪ್ರೀತಿಪಾತ್ರವಾಗಿತ್ತು. ಇಂದು ಮುಖ್ಯವಾಹಿನಿ ರಾಜಕಾರಣಿಯಾಗಿ ನಾನು ಭೂಗತನಾಗಿದ್ದೇನೆ. ನಾನು ಪ್ರತ್ಯೇಕತಾವಾದಿಯಲ್ಲ, ನಾನು ಯಾವುದೇ ಕ್ರಿಮಿನಲ್ ದಾಖಲೆಯನ್ನು ಹೊಂದಿಲ್ಲ, ನಾನು ಯಾವುದೇ ಹಗರಣದಲ್ಲಿಯೂ ಸಿಲುಕಿಲ್ಲ. ಆದರೂ ಯಾವುದೋ ಅಪರಾಧವೆಸಗಿಸದವರಂತೆ ನಾನು ಓಡುತ್ತಿದ್ದೇನೆ. 1947ರಿಂದಲೂ ನೀನು ಇದೇ ಅಪರಾಧ (ಮುಖ್ಯವಾಹಿನಿ ರಾಜಕಾರಣ) ಮಾಡುತ್ತಿದ್ದೀಯಾ ಎಂದು ಗಡಿಯಾಚೆಯ ಜನರು ಹೇಳುತ್ತಿದ್ದಾರೆ. ಹಾಗಾದರೆ ನನ್ನ ಜಾಗ ಯಾವುದು?

► ಈಗ ನಿಮ್ಮ ವಿಚಾರವೇನು?

ಭಾರತದ ಸಂವಿಧಾನದಲ್ಲಿ ನಂಬಿಕೆ ಹೊಂದಿರುವ, ಚುನಾವಣೆಗಳಲ್ಲಿ ಸ್ಪರ್ಧಿಸುವ ಮತ್ತು ಪ್ರತ್ಯೇಕತಾವಾದಿಗಳ ವಿರುದ್ಧ ಹೋರಾಡುವ ಯಾರೇ ಆದರೂ ದ್ವಿರಾಷ್ಟ್ರ ಸಿದ್ಧಾಂತವೊಂದು ವೈಫಲ್ಯ ಎಂದು ಭಾವಿಸಿದ್ದಾರೆ. ಆದರೆ ಭಾರತ ಸರಕಾರದ ಕ್ರಮವು ದ್ವಿರಾಷ್ಟ್ರ ಸಿದ್ಧಾಂತವನ್ನು ಎತ್ತಿಹಿಡಿದಿದೆ. ನನ್ನ ಮಟ್ಟಿಗೆ ಹೇಳುವುದಾದರೆ, ನಮಗೆ ವಿಧಿ 370 ನಂಬಿಕೆಯ ವಿಧಿಯಾಗಿತ್ತು, ಆಗಿದೆ ಮತ್ತು ಮುಂದೆಯೂ ಹಾಗೆಯೇ ಇರಲಿದೆ. ಅದನ್ನು ನಮಗೆ ಭಾರತ ಸರಕಾರವು ನೀಡಿತ್ತು, ಯಾವುದೇ ರಾಜಕೀಯ ಪಕ್ಷವಲ್ಲ. ಸಂವಿಧಾನವು ಎಲ್ಲ ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳಿಗಿಂತ ಮಿಗಿಲಾದುದು. ನಮಗೆ ಈ ಖಾತರಿಗಳನ್ನು ನೀಡಲಾಗಿದೆ.

Writer - huffingtonpost.in, ಬೆಟ್ವಾ ಶರ್ಮಾ

contributor

Editor - huffingtonpost.in, ಬೆಟ್ವಾ ಶರ್ಮಾ

contributor

Similar News