ಪಂಜಾಬ್:370ನೇ ವಿಧಿ ವಿರುದ್ಧದ ಪ್ರತಿಭಟನೆ ವಿಫಲಗೊಳಿಸಿದ ಪೊಲೀಸರು

Update: 2019-09-15 14:16 GMT

ಚಂಡಿಗಡ,ಸೆ.15: ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂದೆಗೆದುಕೊಂಡಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಲು ನಿಷೇಧಾಜ್ಞೆಯನ್ನು ಉಲ್ಲಂಘಿಸಿ ರವಿವಾರ ಮೊಹಾಲಿ ನಗರವನ್ನು ಪ್ರವೇಶಿಸಲು ಪ್ರಯತ್ನಿಸಿದ್ದ ಪ್ರತಿಭಟನಾಕಾರರ ಗುಂಪೊಂದನ್ನು ಪೊಲೀಸರು ತಡೆದು ವಾಪಸ್ ಕಳುಹಿಸಿದ್ದಾರೆ.

ಪಂಜಾಬಿನ ಕೆಲವು ಸಂಘಟನೆಗಳು ಕಾಶ್ಮೀರಿ ಕೌಮಿ ಸಂಘರ್ಷ ಸಮರ್ಥನ್ ಸಮಿತಿಯ ಆಶ್ರಯದಲ್ಲಿ ಕೆಲವು ರೈತ ಸಂಘಟನೆಗಳ ಬೆಂಬಲದೊಂದಿಗೆ ಮೊಹಾಲಿಯ ದಸರಾ ಮೈದಾನದಲ್ಲಿ ಪ್ರತಿಭಟನೆಯನ್ನು ನಡೆಸಲು ನಿರ್ಧರಿಸಿದ್ದವು.

ಆದರೆ ಭದ್ರತಾ ಕಳವಳಗಳು ಮತ್ತು ಅಲ್ಪಾವಧಿಯ ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ಮೊಹಾಲಿ ಆಡಳಿತವು ಪ್ರತಿಭಟನೆಗೆ ಅನುಮತಿಯ ನಿರಾಕರಿಸಿತ್ತು.

ನಗರದಲ್ಲಿ ಕಲಂ 144ರಡಿ ನಿಷೇಧಾಜ್ಞೆಯನ್ನು ಹೇರಲಾಗಿದ್ದು,ಎಲ್ಲ ಪ್ರವೇಶ ಮಾರ್ಗಗಳಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ರೈಲಿನ ಮೂಲಕ ಆಗಮಿಸಿ ಪ್ರತಿಭಟನಾ ಸ್ಥಳಕ್ಕೆ ತೆರಳುತ್ತಿದ್ದವರನ್ನು ಪೊಲೀಸರು ತಡೆದು,ಬಸ್‌ಗಳಲ್ಲಿ ಅವರನ್ನು ವಾಪಸ್ ಕಳುಹಿಸಿದರು.

ತನ್ಮಧ್ಯೆ 370ನೇ ವಿಧಿಯ ರದ್ದತಿಯನ್ನು ವಿರೋಧಿಸಿ ಸಮಿತಿಯ ನೇತೃತ್ವದಲ್ಲಿ ಸಂಗ್ರೂರ್ ಜಿಲ್ಲೆಯಲ್ಲಿ ಗುಂಪೊಂದು ಪ್ರತಿಭಟನೆ ನಡೆಸಿದೆ ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News