ಸೀಟ್ ಬೆಲ್ಟ್ ಧರಿಸಿಲ್ಲ ಎಂದು ರಿಕ್ಷಾ ಚಾಲಕನಿಗೆ 1000 ರೂ. ದಂಡ !

Update: 2019-09-15 14:30 GMT
ಸಾಂದರ್ಭಿಕ ಚಿತ್ರ

ಪಾಟ್ನಾ, ಸೆ.15: ಹೊಸ ಮೋಟಾರ್ ವಾಹನ ಕಾಯ್ದೆ ಜಾರಿಗೆ ಬಂದ ಬಳಿಕ ಸಾರಿಗೆ ನಿಯಮ ಮೀರುವವರಿಗೆ ಭಾರೀ ದಂಡ ವಿಧಿಸುವ ಘಟನೆ ದೇಶದಾದ್ಯಂತ ವರದಿಯಾಗುತ್ತಿದೆ. ಆದರೆ ಬಿಹಾರದಲ್ಲಿ ನಡೆದ ಘಟನೆ ಮಾತ್ರ ವಿಚಿತ್ರವಾಗಿದೆ. ಸೀಟ್ ಬೆಲ್ಟ್ ಧರಿಸಿಲ್ಲದ ರಿಕ್ಷಾ ಚಾಲಕನಿಗೆ ಪೊಲೀಸರು 1000 ರೂ. ದಂಡ ವಿಧಿಸಿದ್ದಾರೆ.

ಹೊಸ ಕಾಯ್ದೆಯಂತೆ ಸೀಟ್ ಬೆಲ್ಟ್ ಧರಿಸದೆ ವಾಹನ ಚಲಾಯಿಸಿದರೆ ವಿಧಿಸಲಾಗುವ ದಂಡದ ಪ್ರಮಾಣವನ್ನು 10 ಪಟ್ಟು ಏರಿಸಿ 1000 ರೂ.ಗೆ ಹೆಚ್ಚಿಸಲಾಗಿದೆ. ಆದರೆ ಆಟೊ ರಿಕ್ಷಾವು ಸೀಟ್‌ ಬೆಲ್ಟ್ ಹೊಂದಿರುವ ವಾಹನ ಶ್ರೇಣಿಯಲ್ಲಿಲ್ಲ. ಶನಿವಾರ ಸರೈಯ ಎಂಬಲ್ಲಿ ಈ ಘಟನೆ ನಡೆದಿದೆ. ವಾಸ್ತವವಾಗಿ ನಡೆದಿದ್ದೇನೆಂದರೆ, ಆ ರಿಕ್ಷಾ ಚಾಲಕ ಸಾರಿಗೆ ನಿಯಮ ಉಲ್ಲಂಘಿಸಿದ್ದಕ್ಕೆ ಆತನನ್ನು ಪೊಲೀಸರು ತಡೆದಿದ್ದಾರೆ. ಆದರೆ ಆತ ತೀರಾ ಬಡವನಾಗಿದ್ದರಿಂದ ಅತ್ಯಂತ ಕನಿಷ್ಟ ದಂಡ ವಿಧಿಸಲು ಪೊಲೀಸರು ನಿರ್ಧರಿಸಿದ್ದಾರೆ.

ನೂತನ ನಿಯಮದ ಪ್ರಕಾರ ಈ ಪ್ರಕರಣದಲ್ಲಿ ಅತೀ ಕಡಿಮೆ ದಂಡವೆಂದರೆ 1000 ರೂ. ಇದು ಸೀಟ್ ಬೆಲ್ಟ್ ಧರಿಸದೆ ವಾಹನ ಚಲಾಯಿಸಿದರೆ ವಿಧಿಸುವ ದಂಡ. ಈ ದಂಡವನ್ನೇ ಆಟೋರಿಕ್ಷಾ ಚಾಲಕನಿಗೆ ವಿಧಿಸಿ ಚಲನ್ ನೀಡಲಾಗಿದೆ.

ಇದೊಂದು ಪ್ರಮಾದ ಎಂಬುದು ತಿಳಿದಿದೆ. ಆದರೆ ರಿಕ್ಷಾ ಚಾಲಕನ ಪರಿಸ್ಥಿತಿ ಗಮನಿಸಿ ಹೀಗೆ ಮಾಡಲಾಗಿದೆ ಎಂದು ಸ್ಥಳೀಯ ಠಾಣಾಧಿಕಾರಿ ಅಜಯ್ ಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News