ಎಚ್ಚರಿಕೆಯ ಹೊರತಾಗಿಯೂ ಸರಕಾರಿ ಬಂಗಲೆ ತೆರವುಗೊಳಿಸದ 82 ಮಾಜಿ ಸಂಸದರು
ಹೊಸದಿಲ್ಲಿ, ಸೆ.15: ಸರಕಾರಿ ಬಂಗಲೆಯನ್ನು ತೆರವುಗೊಳಿಸುವಂತೆ ಸೂಚನೆ ನೀಡಿದ ಬಳಿಕವೂ 80ಕ್ಕೂ ಹೆಚ್ಚು ಮಾಜಿ ಸಂಸದರು ಸರಕಾರಿ ಬಂಗಲೆ ತೆರವುಗೊಳಿಸಿಲ್ಲ ಎಂದು ಸರಕಾರದ ಮೂಲಗಳು ತಿಳಿಸಿವೆ.
ಈ ಮಾಜಿ ಸಂಸದರ ವಿರುದ್ಧ ಸರಕಾರಿ ನಿವೇಶನ (ಅಕ್ರಮ ನಿವಾಸಿಗಳ ತೆರವು) ಕಾಯ್ದೆಯಡಿ ಶೀಘ್ರ ಬಂಗಲೆಯನ್ನು ತೆರವುಗೊಳಿಸಲು ಸರಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಸುಮಾರು 200 ಮಾಜಿ ಸಂಸದರು ಸರಕಾರಿ ಬಂಗಲೆಯನ್ನು ತೆರವುಗೊಳಿಸಿಲ್ಲ ಎಂದು ಲೋಕಸಭೆಯ ವಸತಿ ಸಮಿತಿ ಆಗಸ್ಟ್ 19ರಂದು ನೀಡಿದ್ದ ವರದಿಯಲ್ಲಿ ತಿಳಿಸಿತ್ತು ಮತ್ತು ಈ ಬಂಗಲೆಗಳಿಗೆ ನೀರು, ವಿದ್ಯುಚ್ಛಕ್ತಿ ಹಾಗೂ ಅಡುಗೆ ಅನಿಲ ಸಂಪರ್ಕ ವ್ಯವಸ್ಥೆಯನ್ನು ವಾರದೊಳಗೆ ಕಡಿತಗೊಳಿಸುವಂತೆ ಸೂಚಿಸಿತ್ತು.
ಸಮಿತಿಯ ಸೂಚನೆಯ ಬಳಿಕ ಬಹುತೇಕ ಮಾಜಿ ಸಂಸದರು ಸರಕಾರಿ ಬಂಗಲೆಯನ್ನು ತೆರವುಗೊಳಿಸಿದ್ದರೂ 82 ಮಾಜಿ ಸಂಸದರು ಇನ್ನೂ ತೆರವುಗೊಳಿಸಿಲ್ಲ. ಇಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಮಿತಿ ತಿಳಿಸಿದೆ.
ನಿಯಮದಂತೆ, ಲೋಕಸಭೆಯ ಅವಧಿ ಮುಗಿದು ಒಂದು ತಿಂಗಳೊಳಗೆ ಮಾಜಿ ಸಂಸದರು ತಮ್ಮ ಸರಕಾರಿ ನಿವಾಸವನ್ನು ತೆರವುಗೊಳಿಸಬೇಕು.