×
Ad

ತಬ್ರೇಝ್ ಅನ್ಸಾರಿ ಗುಂಪು ಹತ್ಯೆ: ಸಾಕ್ಷಿಗಳ ಹೇಳಿಕೆ, ಪೊಲೀಸರ ಹೇಳಿಕೆ ಮಧ್ಯೆ ವ್ಯತ್ಯಾಸ

Update: 2019-09-15 21:39 IST

ರಾಂಚಿ,ಸೆ.15: 22ರ ಹರೆಯದ ತಬ್ರೇಝ್ ಅನ್ಸಾರಿಯ ಸಾವು ಒಂದು ಪೂರ್ವಯೋಜಿತ ಹತ್ಯೆಯಾಗಿರಲಿಲ್ಲ ಮತ್ತು ಅವರ ಸಾವು ಹೃದಯಾಘಾತದಿಂದ ಸಂಭವಿಸಿತ್ತೇ ಹೊರತು ತಲೆಗೆ ಬಿದ್ದ ಏಟಿನಿಂದಲ್ಲ ಎಂದು ತಿಳಿಸಿದ್ದ ಜಾರ್ಖಂಡ್ ಪೊಲೀಸರು ಆರೋಪಿಗಳ ವಿರುದ್ಧ ದಾಖಲಿಸಲಾಗಿದ್ದ ಹತ್ಯೆ ಪ್ರಕರಣವನ್ನು ರದ್ದುಗೊಳಿಸಿದ್ದರು. ಆದರೆ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ದೋಷಾರೋಪಣೆಯ ವಿಶ್ಲೇಷಣೆ, ಪ್ರಮುಖ ಸಾಕ್ಷಿಗಳು ಮತ್ತು ಕೇಸ್‌ಡೈರಿಗಳು ಪೊಲೀಸರ ಈ ಹೇಳಿಕೆಯ ಬಗ್ಗೆ ಅನುಮಾನ ಮೂಡಿಸುತ್ತದೆ. “ಅವನು ಸಾಯುವಷ್ಟು ಹೊಡೆಯಿರಿ” ಎಂದು ದಾಳಿಕೋರರ ಪೈಕಿ ಒಬ್ಬ ಬೊಬ್ಬೆ ಹೊಡೆಯುತ್ತಿದ್ದ ಎಂದು ಅನ್ಸಾರಿ ಮೇಲೆ ದಾಳಿ ನಡೆದ ಸುದ್ದಿ ಕೇಳಿ ಸ್ಥಳಕ್ಕೆ ಆಗಮಿಸಿದ್ದ ಅವರ ಚಿಕ್ಕಪ್ಪ ಮುಹಮ್ಮದ್ ಮಸ್ರೂರ್ ಆಲಮ್ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜುಲೈ 23ರಂದು ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಲಾದ ದೋಷಾರೋಪಣೆಯಲ್ಲಿ ಹೇಳಿಕೆ ನೀಡಿರುವ 24 ಸಾಕ್ಷಿಗಳ ಪೈಕಿ ಮಸ್ರೂರ್ ಕೂಡಾ ಒಬ್ಬರಾಗಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರ ಮಂಡಳಿಯ ಪ್ರಾಥಮಿಕ ವರದಿಯನ್ನೂ ದೋಷಾರೋಪಣೆಯಲ್ಲಿ ಉಲೇಖಿಸಲಾಗಿದ್ದು ಅದರಲ್ಲಿ ತಬ್ರೇಝ್ ಸಾವು ತಲೆಗೆ ಬಿದ್ದ ಏಟಿನಿಂದ ಸಂಭವಿಸಿದೆ ಎಂದು ತಿಳಿಸಲಾಗಿದೆ. ಇದೇ ವೇಳೆ ಒಳಾಂಗಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವುದಕ್ಕೂ ಮೊದಲು ಪೊಲೀಸರು ಆರೋಪಿಗಳ ವಿರುದ್ಧ ಹತ್ಯೆ (ಐಪಿಸಿ 302ನೇ ವಿಧಿ) ಪ್ರಕರಣವನ್ನು ಕೈಬಿಟ್ಟು ಉದ್ದೇಶಿತವಲ್ಲದ ಹತ್ಯೆ(ಐಪಿಸಿ 304ನೇ ವಿಧಿ) ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಕೇಸ್‌ಡೈರಿ ಸೂಚಿಸುತ್ತದೆ ಎಂದು ಪತ್ರಿಕೆ ವರದಿ ಮಾಡಿದೆ.

ಒಳಾಂಗಗಳ ವರದಿ ಬಂದ ನಂತರ ಐಪಿಸಿ ವಿಧಿಗಳನ್ನು ಬದಲಾಯಿಸಿರುವ ಸಾಧ್ಯತೆಯೂ ಇದೆ ಎಂದು ಕೇಸ್‌ಡೈರಿ ತಿಳಿಸುತ್ತದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News