ಶಾಸ್ತ್ರೋಕ್ತವಾಗಿ ಮೃತ ಬ್ರಾಹ್ಮಣನ ಅಂತ್ಯಸಂಸ್ಕಾರ ನೆರವೇರಿಸಿದ ಮುಸ್ಲಿಮ್ ಸಹೋದರರು!

Update: 2019-09-16 04:49 GMT

ಅಹ್ಮದಾಬಾದ್, ಸೆ.16: ನಾಲ್ಕು ದಶಕಗಳ ಕಾಲ ತಂದೆಯ ಆತ್ಮೀಯ ಸ್ನೇಹಿತರಾಗಿದ್ದ ಬ್ರಾಹ್ಮಣ ಸಮುದಾಯದ ವ್ಯಕ್ತಿಯೊಬ್ಬರು ಮೃತಪಟ್ಟಾಗ, ಮೂವರು ಮುಸ್ಲಿಮ್ ಸಹೋದರರು ವಿಧಿವತ್ತಾಗಿ ಬ್ರಾಹ್ಮಣ ಸಂಪ್ರದಾಯದಂತೆ ಆ ವ್ಯಕ್ತಿಯ ಅಂತ್ಯಸಂಸ್ಕಾರ ನೆರವೇರಿಸಿದ ಅಪರೂಪದ ಘಟನೆ ವರದಿಯಾಗಿದೆ.

ಅಮ್ರೇಲಿ ಜಿಲ್ಲೆಯ ಸಾವರಕುಂಡ್ಲಾ ಪಟ್ಟಣದ ಭಾನುಶಂಕರ್ ಪಾಂಡ್ಯ ಅವರ ದತ್ತು ಕುಟುಂಬ ಕೂಡಾ ಇಲ್ಲಿಗೆ ಆಗಮಿಸಿದಾಗ ತೀರಾ ಸಂಪ್ರದಾಯಸ್ಥ ಕುಟುಂಬವೇ ಆಗಿತ್ತು. ಅಂತೆಯೇ ದಿನಗೂಲಿಯಿಂದ ಕುಟುಂಬ ನಿರ್ವಹಿಸುತ್ತಿದ್ದ ಅಬು, ನಾಸೀರ್ ಮತ್ತು ಝುಬೈರ್ ಖುರೇಶಿ ಸಹೋದರರು ದಿನಕ್ಕೆ ಐದು ಬಾರಿ ನಮಾಝ್ ಮಾಡುತ್ತಿದ್ದರು ಹಾಗೂ ಒಂದು ಬಾರಿಯೂ ರಮಝಾನ್ ಉಪವಾಸ  ತಪ್ಪಿಸದಷ್ಟು ಧಾರ್ಮಿಕ ಶ್ರದ್ಧೆ ಇರುವವರು. ಆದರೆ ತಮ್ಮ ಜತೆಗೇ ಹಲವು ವರ್ಷಗಳಿಂದ ಜೀವನ ಸಾಗಿಸಿಕೊಂಡು ಬಂದ ಪಾಂಡ್ಯ ಅವರ ಅಂತ್ಯ ಸಂಸ್ಕಾರದ ವಿಚಾರಕ್ಕೆ ಬಂದಾಗ, ಮೂವರು ಸಹೋದರರು ಧೋತಿ ಉಟ್ಟು ಜನಿವಾರ ಧರಿಸಲು ಹಿಂದೆ ಮುಂದೆ ನೋಡಲಿಲ್ಲ.

ಶನಿವಾರ ವಿಧಿವತ್ತಾಗಿ ತಮ್ಮ ಪ್ರೀತಿಯ ಅಂಕಲ್‌ನ ಅಂತ್ಯಸಂಸ್ಕಾರವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದರು.

"ಭಾನುಶಂಕರ್ ಅಂಕಲ್ ಸಾವಿನ ಅಂಚಿನಲ್ಲಿದ್ದಾಗ ನಾವು ಹಿಂದೂ ಕುಟುಂಬವೊಂದರಿಂದ ಗಂಗಾಜಲ ತಂದು ಕುಡಿಸಿದೆವು. ಅವರು ಕೊನೆಯುಸಿರೆಳೆದಾಗ, ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಅವರ ಅಂತ್ಯಸಂಸ್ಕಾರವನ್ನು ನಾವು ನೆರವೇರಿಸುತ್ತೇವೆ ಎಂದು ನೆರೆಯವರಿಗೆ ಹೇಳಿದೆವು. ಮೃತದೇಹ ಎತ್ತಲು ಜನಿವಾರ ಬೇಕೇ ಬೇಕು ಎಂದು ಹೇಳಿದಾಗ ಅದಕ್ಕೂ ಒಪ್ಪಿಕೊಂಡೆವು" ಎಂದು ಝುಬೈರ್ ವಿವರಿಸಿದರು.

ನಾಸೀರ್‌ನ ಮಗ ಅರ್ಮನ್ ಚಿತೆಗೆ ಅಗ್ನಿಸ್ಪರ್ಶ ಮಾಡಿದ. 12ನೇ ದಿನ ಹಿಂದೂ ಸಂಪ್ರದಾಯದಂತೆ ಅರ್ಮನ್‌ನ ತಲೆ ಬೋಳಿಸುತ್ತೇವೆ ಎಂದು ಹೇಳಿದರು. 40 ವರ್ಷಗಳ ಹಿಂದೆ ಈ ಸಹೋದರರ ತಂದೆ ಭಿಖು ಖುರೇಶಿ ಹಾಗೂ ಪಾಂಡ್ಯ ಮೊದಲ ಬಾರಿ ಕೂಲಿ ಕೆಲಸದ ವೇಳೆ ಭೇಟಿಯಾದಾಗಿನಿಂದ ಸ್ನೇಹಿತರಾಗಿದ್ದರು. ಖುರೇಶಿ ಮೂರು ವರ್ಷಗಳ ಹಿಂದೆ ಮೃತಪಟ್ಟಿದ್ದರು.

ಭಾನುಶಂಕರ್‌ಗೆ ಕುಟುಂಬ ಇರಲಿಲ್ಲ; ಕೆಲ ವರ್ಷಗಳ ಹಿಂದೆ ಅವರ ಕಾಲು ಮುರಿದಾಗಿನಿಂದ ನಮ್ಮ ಮನೆಯಲ್ಲೇ ಇರುವಂತೆ ತಂದೆ ಹೇಳಿದ್ದರು. ನಮ್ಮ ಕುಟುಂಬದ ಅವಿಭಾಜ್ಯ ಅಂಗವಾಗಿದ್ದರು ಎಂದು ಅವರು ಬಣ್ಣಿಸಿದರು.

"ನಮ್ಮ ಮಕ್ಕಳು ಅವರನ್ನು 'ದಾದಾ' ಎಂದು ಕರೆಯುತ್ತಿದ್ದರು. ಈದ್ ಸಂಭ್ರಮದಲ್ಲಿ ಅವರು ಶ್ರದ್ಧೆಯಿಂದ ಪಾಲ್ಗೊಳ್ಳುತ್ತಿದ್ದರು. ಮಕ್ಕಳಿಗೆ ಉಡುಗೊರೆ ತರಲು ಮರೆಯುತ್ತಿರಲಿಲ್ಲ"

ಭಾನುಶಂಕರ್ ಇದ್ದಾಗ ಖುರೇಶಿ ಕುಟುಂಬ ಅವರಿಗಾಗಿ ಪ್ರತ್ಯೇಕ ಸಸ್ಯಾಹಾರಿ ಅಡುಗೆ ಸಿದ್ಧಪಡಿಸುತ್ತಿತ್ತು.

"ಬಾನುಶಂಕರ್ ಅವರ ಅಂತ್ಯಸಂಸ್ಕಾರವನ್ನು ಹಿಂದೂ ಸಂಪ್ರದಾಯಕ್ಕೆ ಅನುಸಾರವಾಗಿ ಮಾಡುವ ಮೂಲಕ ಅಬು, ನಾಸಿರ್ ಮತ್ತು ಝುಬೈರ್ ಸಾಮರಸ್ಯಕ್ಕೆ ಹೊಸ ಭಾಷ್ಯ ಬರೆದಿದ್ದಾರೆ" ಎಂದು ಅಮ್ರೇಲಿ ಜಿಲ್ಲಾ ಬ್ರಾಹ್ಮಣ ಸಮಾಜದ ಉಪಾಧ್ಯಕ್ಷ ಪರಾಗ್ ತ್ರಿವೇದಿ ಬಣ್ಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News