ಲೈಂಗಿಕ ಕಿರುಕುಳ ಆರೋಪಿ ಪ್ರೊಫೆಸರ್‌ಗೆ ರಜೆ ಮೇಲೆ ತೆರಳುವಂತೆ ಸೂಚನೆ

Update: 2019-09-16 16:44 GMT

ಲಕ್ನೊ, ಸೆ.16: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಬನಾರಸ್ ಹಿಂದು ವಿವಿಯ ಪ್ರೊಫೆಸರ್ ಎಸ್‌ಕೆ ಚೌಬೆಗೆ ದೀರ್ಘಾವಧಿ ರಜೆಯಲ್ಲಿ ತೆರಳುವಂತೆ ಆಡಳಿತ ವರ್ಗ ಸೂಚಿಸಿದೆ ಎಂದು ವರದಿಯಾಗಿದೆ.

 ಪ್ರೊಫೆಸರ್ ಚೌಬೆಯನ್ನು ಮರು ನೇಮಕಗೊಳಿಸಿರುವುದನ್ನು ವಿರೋಧಿಸಿ ಶನಿವಾರ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ವಿವಿ ಈ ಕ್ರಮ ಕೈಗೊಂಡಿದೆ. ಅವರ ವಿರುದ್ಧದ ದೂರನ್ನು ಸಂಸ್ಥೆಯ ಕಾರ್ಯಕಾರಿ ಸಮಿತಿಗೆ ಮತ್ತೆ ವಹಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

    ಒಡಿಶಾಗೆ ಅಧ್ಯಯನ ಪ್ರವಾಸಕ್ಕೆ ತೆರಳಿದ್ದ ಸಂದರ್ಭ ವಿವಿಯ ಪ್ರಾಣಿಶಾಸ್ತ್ರ ವಿಭಾಗದ ಪ್ರೊಫೆಸರ್ ಎಸ್‌ಕೆ ಚೌಬೆ ಅಶ್ಲೀಲ ಪದ ಬಳಸುತ್ತಿದ್ದ ಜೊತೆ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದರು ಎಂದು ವಿಭಾಗದ ಕೆಲವು ವಿದ್ಯಾರ್ಥಿನಿಯರು ನೀಡಿದ ದೂರಿನ ಹಿನ್ನೆಲೆಯಲ್ಲಿ ಚೌಬೆಯನ್ನು 2018ರ ಅಕ್ಟೋಬರ್‌ನಲ್ಲಿ ಅಮಾನತುಗೊಳಿಸಲಾಗಿತ್ತು. ಕಳೆದ ಜೂನ್‌ನಲ್ಲಿ ಅಮಾನತು ಆದೇಶವನ್ನು ರದ್ದುಗೊಳಿಸಲಾಗಿತ್ತು ಆದರೆ ಪಾಠ ಮಾಡುವುದನ್ನು ನಿಷೇಧಿಸಲಾಗಿತ್ತು. ಆದರೆ ಕೆಲದಿನಗಳಿಂದ ಚೌಬೆ ತರಗತಿಗೆ ತೆರಳಿ ಪಾಠ ಮಾಡಲಾರಂಭಿಸಿದ್ದರು ಎನ್ನಲಾಗಿದೆ.

ಇದನ್ನು ವಿರೋಧಿಸಿ ಶನಿವಾರ ಪ್ರತಿಭಟನೆ ನಡೆಸಿದ್ದ ವಿದ್ಯಾರ್ಥಿಗಳು ಚೌಬೆಯನ್ನು ವಜಾಗೊಳಿಸುವಂತೆ ಒತ್ತಾಯಿಸಿದ್ದರು. ಚೌಬೆಯನ್ನು ಮರುನೇಮಕಗೊಳಿಸಿದ ನಿರ್ಧಾರವನ್ನು ವಿವಿಯ ಕಾರ್ಯಕಾರಿ ಸಮಿತಿಯ ಪರಿಶೀಲನೆಗೆ ಒಪ್ಪಿಸಲು ಹಾಗೂ ಸಮಿತಿಯ ನಿರ್ಧಾರ ಹೊರಬೀಳುವವರೆಗೆ ಚೌಬೆಯನ್ನು ದೀರ್ಘಾವಧಿ ರಜೆಯಲ್ಲಿ ಕಳುಹಿಸಲು ತೀರ್ಮಾನಿಸಲಾಗಿದೆ ಎಂದು ವಿವಿಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ್ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News