ಮಕ್ಕಳು ಮುಸ್ಲಿಂ ಬಾಲಕಿ ಜೊತೆ ಆಡುವುದಿಲ್ಲ ಎಂದಾಗ ಈ ಬಡಾವಣೆಯ ಮಹಿಳೆಯರು ಮಾಡಿದ್ದೇನು ಗೊತ್ತೇ ?

Update: 2019-09-16 18:23 GMT
ಫೋಟೊ: mumbaimirror

ಮುಂಬೈ, ಸೆ.16: ಇದೇ ಮೊದಲ ಬಾರಿ ಮುಂಬೈಯ ವಸತಿ ಸಮುಚ್ಛಯದಲ್ಲಿ ನೆಲೆಸಿರುವ ಮಹಿಳೆಯರು ಒಟ್ಟಾಗಿ ವೈವಿಧ್ಯತೆಯಲ್ಲಿ ಏಕತೆಗೆ ಆಗ್ರಹಿಸುವ ಮೂಲಕ ಇಡೀ ದೇಶಕ್ಕೆ ಆದರ್ಶಪ್ರಾಯರಾಗಿದ್ದಾರೆ. 

ಮಲಾಡ್‌ನಲ್ಲಿರುವ ಹೌಸಿಂಗ್ ಸೊಸೈಟಿಯೇ ಅಂತಹ ಶ್ಲಾಘನೆಗೆ ಪಾತ್ರವಾಗಿರುವ ವಸತಿ ಸಮುಚ್ಛಯವಾಗಿದೆ.

ಕಳೆದ ವಾರ ಇಲ್ಲಿನ ಮುಸ್ಲಿಂ ನಿವಾಸಿಯೊಬ್ಬರ ಆರರ ಹರೆಯದ ಪುತ್ರಿಯ ಜೊತೆ ಆಕೆಯ ಧರ್ಮದ ಕಾರಣದಿಂದ ಆಡಲು ಅಲ್ಲಿನ ಇತರ ಮಕ್ಕಳು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಮಗು ಕೂಗಿಕೊಂಡು ತನ್ನ ಮನೆ ಸೇರಿತ್ತು. ಇದನ್ನು ತಿಳಿದ ಹೌಸಿಂಗ್ ಸೊಸೈಟಿಯ ಮಹಿಳೆಯರು ಒಟ್ಟಾಗಿ ವೈವಿಧ್ಯತೆಯಲ್ಲಿ ಏಕತೆ ಪಾಲಿಸಲು ನಿರ್ಧರಿಸಿದ್ದು, ತಮ್ಮ ಮಕ್ಕಳಿಗೂ ಆ ಬಗ್ಗೆ ತಿಳುವಳಿಕೆ ಮೂಡಿಸಲು ಮುಂದಾಗಿದ್ದಾರೆ.

ಈ ಘಟನೆ ಕಳೆದ ಶನಿವಾರ ಪಶ್ಚಿಮ ಮಲಾಡ್‌ನಲ್ಲಿರುವ ರೋಯಲ್ ಓಯಾಸಿಸ್ ಸೊಸೈಟಿಯಲ್ಲಿ ನಡೆದಿದೆ. ತನ್ನ ಮಗುವಿನ ಜೊತೆ ನಡೆದ ಘಟನೆಯ ಕುರಿತು ತಾಯಿ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಬರೆದುಕೊಂಡಿದ್ದರು. ಇದನ್ನು ಓದಿದ ಸೊಸೈಟಿಯ ಹಲವು ಮಹಿಳೆಯರು ಆಕೆಗೆ ಬೆಂಬಲ ಸೂಚಿಸಿದ್ದರು. ಕೆಲವು ಮಹಿಳೆಯರು ಮಗುವಿನ ತಾಯಿಯನ್ನು ಭೇಟಿಯಾಗಿ ಮಕ್ಕಳಿಂದ ಇಂತಹ ವರ್ತನೆ ಮತ್ತೆ ನಡೆಯಲು ಬಿಡುವುದಿಲ್ಲ ಎಂದು ಸಮಾಧಾನ ಹೇಳಿದ್ದರು. ಅಷ್ಟು ಮಾತ್ರವಲ್ಲದೆ, ತಮ್ಮ ಮಕ್ಕಳು ಎಲ್ಲರಿಗೂ ಗೌರವ ನೀಡುವಂತೆ ಅವರಿಗೆ ತಿಳುವಳಿಕೆ ನೀಡಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.

ಅದರಂತೆ, ಸಭೆ ನಡೆಸಿದ ಸಮುಚ್ಚಯದ ಮಹಿಳೆಯರು, ವೈವಿಧ್ಯತೆಯಲ್ಲಿ ಏಕತೆಯ ಸಂದೇಶವನ್ನು ರವಾನಿಸುವ ಸಲುವಾಗಿ ಎಲ್ಲ ಹಬ್ಬಗಳನ್ನು ಜೊತೆಯಾಗಿ ಆಚರಿಸುವ ನಿರ್ಧಾರಕ್ಕೆ ಬಂದರು. ಇದರ ಭಾಗವಾಗಿ ಗುರುವಾರ ಎಲ್ಲರೂ ಜೊತೆಯಾಗಿ ಗಣಪತಿ ವಿಸರ್ಜನೆ ಕಾರ್ಯಕ್ರಮ ನಡೆಸಿದ್ದಾರೆ.

ಬೆಳವಣಿಗೆಯ ಕುರಿತು ಮಾಧ್ಯಮದ ಜೊತೆ ಮಾತನಾಡಿದ ಬಾಲಕಿಯ ತಾಯಿ, ತನ್ನ ಮಕ್ಕಳು ಸರಿಯಾದ ವಾತಾವರಣದಲ್ಲಿ ಬೆಳೆಯುತ್ತಿದ್ದಾರೆ ಎಂದು ನನಗೆ ಶನಿವಾರದ ಘಟನೆಯಿಂದ ತಿಳಿಯಿತು. ಮಕ್ಕಳು ಸದ್ಯ ಜೊತೆಯಾಗಿ ಆಡುತ್ತಿದ್ದಾರೆ ಮತ್ತು ಅವರ ಮಧ್ಯೆ ಯಾವ ವೈಷಮ್ಯವೂ ಇಲ್ಲ ಎಂದು ತಿಳಿಸಿದ್ದಾರೆ.

ಸದ್ಯ ಸೊಸೈಟಿಯ ಸದಸ್ಯರು ತಮ್ಮ ಮಕ್ಕಳು ವಿವಿಧ ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳಬೇಕು ಎಂಬ ಉದ್ದೇಶದಿಂದ ಭೋಜನ ಕೂಟಗಳನ್ನು ಮತ್ತು ಸ್ನೇಹಮಿಲನ ಕಾರ್ಯಕ್ರಮಗಳನ್ನು ಆಯೋಜಿಸಲು ಯೋಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News