17 ಒಬಿಸಿ ಪರಿಶಿಷ್ಟ ಜಾತಿ ಪಟ್ಟಿಗೆ ಹೈಕೋರ್ಟ್ ತಡೆ: ಆದಿತ್ಯನಾಥ್ ಸರಕಾರಕ್ಕೆ ಭಾರೀ ಹಿನ್ನಡೆ

Update: 2019-09-16 18:22 GMT

ಲಕ್ನೋ, ಸೆ. 16: ಮೀಸಲಾತಿ ಸೌಲಭ್ಯ ಹೆಚ್ಚಿಸಲು ಸಾಧ್ಯವಾಗುವಂತೆ 17 ಇತರ ಹಿಂದುಳಿದ ವರ್ಗಗಳನ್ನು ಪರಿಶಿಷ್ಟ ಜಾತಿಗೆ ಸೇರಿಸುವ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಯೋಜನೆಗೆ ಅಲಹಾಬಾದ್ ಉಚ್ಚ ನ್ಯಾಯಾಲಯ ಸೋಮವಾರ ತಡೆ ನೀಡಿದೆ. ಇದರಿಂದ ಉಪ ಚುನಾವಣೆ ನಡೆಯಲಿರುವ ಉತ್ತರಪ್ರದೇಶದ ಮುಖ್ಯಮಂತ್ರಿಗೆ ತೀವ್ರ ಹಿನ್ನಡೆ ಉಂಟಾಗಿದೆ.

   ಕಷ್ಯಪ, ರಾಜ್‌ಭರ್, ದೀವಾರ, ಬಿಂಡ್, ಕುಮ್ಹಾರ್, ಕೇವತ್, ನಿಷಾದ್, ಭಾರ್, ಮಲ್ಲಾಹ್, ಪ್ರಜಾಪತಿ, ಧಿಮಾರ್, ಬಾಥಮ್, ತುರ್ಹಾ, ಮಾಂಝಿ ಹಾಗೂ ಮಚುವಾದಂತಹ ಇತರ ಹಿಂದುಳಿದ ವರ್ಗಗಳಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡುವಂತೆ ಕಳೆದ ಜೂನ್‌ನಲ್ಲಿ ಉತ್ತರಪ್ರದೇಶದ ಬಿಜೆಪಿ ಸರಕಾರ ಆದೇಶಿಸಿತ್ತು. ಮುಖ್ಯಮಂತ್ರಿ ಆದಿತ್ಯನಾಥ್ ಅವರ ಈ ನಡೆಗೆ ಪ್ರತಿಪಕ್ಷಗಳ ನಾಯಕರು ಪ್ರತಿಭಟನೆ ವ್ಯಕ್ತಪಡಿಸಿರುವುದು ಮಾತ್ರವಲ್ಲ, ಬಿಜೆಪಿಯ ನಾಯಕರು ಕೂಡ ಟೀಕಿಸಿದ್ದರು. ಉತ್ತರಪ್ರದೇಶದಲ್ಲಿ 2022ರಲ್ಲಿ 12 ವಿಧಾನ ಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಒಬಿಸಿ ಜಾತಿಗಳ ಮನ ಗೆಲ್ಲುವ ರಾಜಕೀಯ ತಂತ್ರವಾಗಿ ಆದಿತ್ಯನಾಥ್ ಮೀಸಲಾತಿ ನೀಡಿದ್ದಾರೆ ಎಂಬ ಆರೋಪ ವ್ಯಕ್ತವಾಗಿತ್ತು.

ಯೋಗಿ ಆದಿತ್ಯನಾಥ್ ಅವರ ನಡೆಯನ್ನು ಸಂಸತ್ತಿನಲ್ಲಿ ಅವರ ಬಿಜೆಪಿಯ ಸಹೋದ್ಯೋಗಿ, ಕೇಂದ್ರ ಸಚಿವ ತಾವರ್ ಚಂದ್ ಗೆಹ್ಲೋಟ್ ‘ಅಸಾಂವಿಧಾನಿಕ’ ಎಂದು ಕರೆದಿದ್ದರು. ‘‘ಇದು ಸಮರ್ಪಕ ನಡೆ ಅಲ್ಲ’’ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News