ಬಿಎಸ್‌ಪಿ ಶಾಸಕರ ಪಕ್ಷಾಂತರದಲ್ಲಿ ಕಾಂಗ್ರೆಸ್ ಪಾತ್ರವಿಲ್ಲ: ಅಶೋಕ್ ಗೆಹ್ಲೋಟ್

Update: 2019-09-17 14:38 GMT

ಜೈಪುರ,ಸೆ.17: ರಾಜಸ್ಥಾನದ ಬಹುಜನ ಸಮಾಜ ಪಕ್ಷದ ಆರು ಶಾಸಕರು ಪಕ್ಷ ತೊರೆದು ಕಾಂಗ್ರೆಸ್ ಸೇರಿರುವುದನ್ನು ಸಮರ್ಥಿಸಿರುವ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಕಾಂಗ್ರೆಸ್ ಬಿಜೆಪಿಯಂತಲ್ಲ, ನಾವು ಶಾಸಕರನ್ನು ಖರೀದಿಸಿಲ್ಲ. ಕಾಂಗ್ರೆಸ್ ಸೇರುವ ನಿರ್ಧಾರ ಬಿಎಸ್‌ಪಿ ಶಾಸಕರದ್ದೇ ಆಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಗೆಹ್ಲೋಟ್, ಬಿಎಸ್‌ಪಿ ಶಾಸಕರನ್ನು ಖರೀದಿಸಲು ಬಿಜೆಪಿ ಪ್ರಯತ್ನಿಸಿರಬಹುದು. ಆದರೆ ನಾವು ಬಿಜೆಪಿಯಂತಲ್ಲ. ಕರ್ನಾಟಕದಲ್ಲಿ ಸರಕಾರ ರಚಿಸಲು ಬಿಜೆಪಿ ನಮ್ಮ ಪಕ್ಷವನ್ನು ಒಡೆಯಿತು. ಬಿಎಸ್‌ಪಿಯ ಆರು ಶಾಸಕರು ಅವರಾಗಿಯೇ ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾರೆ. ಇದನ್ನು ಮಾಯಾವತಿಯವರು ಅರಿತುಕೊಳ್ಳಬೇಕು. ಕಾಂಗ್ರೆಸ್‌ನ ಯಾವೊಬ್ಬನೂ ಇದರ ಹಿಂದಿಲ್ಲ ಎಂದು ತಿಳಿಸಿದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಗಳಿಸಲು ಕೆಲವೇ ಸ್ಥಾನಗಳ ಕೊರತೆ ಎದುರಿಸಿತ್ತು. ಚುನಾವಣೆಯಲ್ಲಿ ಆರು ಸ್ಥಾನಗಳನ್ನು ಜಯಿಸಿದ್ದ ಬಿಎಸ್‌ಪಿ ಕಾಂಗ್ರೆಸ್‌ಗೆ ಹೊರಗಿನಿಂದ ಬೆಂಬಲ ನೀಡುವುದಾಗಿ ಘೋಷಿಸಿತ್ತು. ಬಿಎಸ್‌ಪಿಯ ಆರು ಮತ್ತು 12 ಪಕ್ಷೇತರರು ಕಾಂಗ್ರೆಸ್‌ಗೆ ಬೆಂಬಲ ನೀಡುವ ಮೂಲಕ ಕಾಂಗ್ರೆಸ್ ಸರಕಾರ ರಚಿಸಿತ್ತು. ಈ ಪೈಕಿ 12 ಮಂದಿ ಪಕ್ಷೇತರರು ಈ ಹಿಂದೆಯೇ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರೆ ಸೋಮವಾರ ಬಿಎಸ್‌ಪಿಯ ಆರು ಶಾಸಕರೂ ಕಾಂಗ್ರೆಸ್ ತೆಕ್ಕೆಗೆ ಜಾರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News