ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಕೋಲ್ಕತಾದ ಮಾಜಿ ಪೊಲೀಸ್ ಆಯುಕ್ತ

Update: 2019-09-17 15:31 GMT

ಹೊಸದಿಲ್ಲಿ,ಸೆ.17: 2,460 ಕೋ.ರೂ.ಗಳ ಶಾರದಾ ಚಿಟ್‌ಫಂಡ್ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಿಬಿಐ ಸಮನ್ಸ್‌ನ್ನು ಕಡೆಗಣಿಸಿರುವ ಕೋಲ್ಕತಾದ ಮಾಜಿ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರು ಸಂಭಾವ್ಯ ಬಂಧನದ ವಿರುದ್ಧ ನಿರೀಕ್ಷಣಾ ಜಾಮೀನು ಕೋರಿ ಮಂಗಳವಾರ ಪಶ್ಚಿಮ ಬಂಗಾಳದ ಬರಸಾತ್ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ್ದಾರೆ.

ಬೆಳಿಗ್ಗೆ ಅವರು ವಿಶೇಷ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು,ಆದರೆ ತನಗೆ ಅಧಿಕಾರ ವ್ಯಾಪ್ತಿಯಿಲ್ಲವೆಂಬ ಕಾರಣದಿಂದ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲು ನ್ಯಾಯಾಲಯವು ನಿರಾಕರಿಸಿತ್ತು.

ಕುಮಾರ್ ಅವರ ಬಂಧನದ ವಿರುದ್ಧ ನೀಡಿದ್ದ ರಕ್ಷಣೆಯನ್ನು ಕಲಕತ್ತಾ ಉಚ್ಚ ನ್ಯಾಯಾಲಯವು ಶುಕ್ರವಾರ ಹಿಂದೆಗೆದುಕೊಂಡ ಬಳಿಕ ಅವರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಶನಿವಾರ ಸಿಬಿಐ ಕಚೇರಿಗೆ ಹಾಜರಾಗುವಂತೆ ಕುಮಾರ್‌ಗೆ ಸಮನ್ಸ್ ಜಾರಿಯಾಗಿತ್ತಾದರೂ ಅದನ್ನು ಕಡೆಗಣಿಸಿದ್ದ ಅವರು ತನ್ನ ಮೊಬೈಲ್ ಫೋನ್‌ನ್ನೂ ಸ್ವಿಚ್ ಆಫ್ ಮಾಡಿದ್ದಾರೆ. ಸಿಬಿಐ ತಂಡವೊಂದು ಅವರ ನಿವಾಸಕ್ಕೆ ತೆರಳಿತ್ತಾದರೂ ಬರಿಗೈಯಲ್ಲಿ ವಾಪಸ್ ಬಂದಿತ್ತು.

  ತಾನು ರಜೆಯಲ್ಲಿರುವುದರಿಂದ ಸಮನ್ಸ್‌ಗೆ ಸ್ಪಂದಿಸಲು ಸಾಧ್ಯವಿಲ್ಲ ಎಂದು ಕುಮಾರ್ ಶನಿವಾರ ಇ-ಮೇಲ್ ಮೂಲಕ ಸಿಬಿಐಗೆ ತಿಳಿಸಿದ್ದರು ಎನ್ನಲಾಗಿದೆ.

  1989ರ ಐಪಿಎಸ್ ತಂಡದ ಅಧಿಕಾರಿಯಾಗಿರುವ ಕುಮಾರ್ ಹಾಲಿ ಅಪರಾಧ ತನಿಖೆ ವಿಭಾಗ (ಸಿಐಡಿ)ದ ಎಡಿಜಿಪಿ ಆಗಿದ್ದಾರೆ. ಪೊಂಝಿ ಸ್ಕೀಮ್‌ಗಳ ಮೂಲಕ ಸಾವಿರಾರು ಹೂಡಿಕೆದಾರರಿಗೆ ಪಂಗನಾಮ ಹಾಕಿರುವ ಶಾರದಾ ಗ್ರುಪ್‌ನ ಸಾಮ್ರಾಜ್ಯ 2013ರಲ್ಲಿ ಕುಸಿದು ಬಿದ್ದ ಬಳಿಕ ಅದಕ್ಕೆ ಸಂಬಂಧಿಸಿದಂತೆ ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸರಕಾರವು ರಚಿಸಿದ್ದ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿದ್ದರು. ಹಗರಣದಲ್ಲಿ ಪ್ರಮುಖ ಸಾಕ್ಷಾಧಾರಗಳನ್ನು ನಾಶ ಮಾಡಿರುವ ಆರೋಪವನ್ನು ಅವರು ಎದುರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News