ಬಿಜೆಪಿಯಿಂದ ಪ್ರಧಾನಿ ಮೋದಿಗೆ ಡಿಜಿಟಲ್ ಉಡುಗೊರೆ

Update: 2019-09-17 15:54 GMT

ಹೊಸದಿಲ್ಲಿ,ಸೆ.17: ಪ್ರಧಾನಿ ನರೇಂದ್ರ ಮೋದಿಯ 69ನೇ ಹುಟ್ಟುಹಬ್ಬದಂದು ಬಿಜೆಪಿ ಡಿಜಿಟಲ್ ಉಡುಗೊರೆ ನೀಡಿದೆ. ಮೋದಿಯ ಜೀವನದ ನಾಲ್ಕು ಹಂತಗಳನ್ನು ನಾಲ್ಕು ಅಧ್ಯಾಯಗಳಾಗಿ ವಿಂಗಡಿಸಿ ಡಿಜಿಟಲ್ ಮಾದರಿಯಲ್ಲಿ ಚಿತ್ರೀಕರಿಸಲಾಗಿರುವ ಸಂಗ್ರಹಣೆಯನ್ನು ಬಿಜೆಪಿ ಪ್ರಧಾನಿಗೆ ನೀಡಿದೆ. ಈ ಸಂಗ್ರಹಣೆಯಲ್ಲಿ, ಬಾಲ್ಯ, ಯುವ ಮೋದಿ, ಮೋದಿ ಮತ್ತು ಸ್ವಾತಂತ್ರ ನಂತರ ಇದೇ ಮೊದಲ ಬಾರಿ ಎಂಬ ನಾಲ್ಕು ಅಧ್ಯಯಗಳಲ್ಲಿ ಮೋದಿಯ ಜೀವನ ಪ್ರಯಾಣವನ್ನು ತಿಳಿಸಲಾಗಿದೆ. ಬಾಲ್ಯದ ಅಧ್ಯಯದಲ್ಲಿ ಪ್ರಧಾನಿ ತನ್ನ ಬಾಲ್ಯದಲ್ಲಿ ತೋರಿದ ಸಾಹಸಗಳ ಬಗ್ಗೆ ಉಲ್ಲೇಖಿಸಲಾಗಿದೆ. ಉದಾಹರಣೆಗೆ, ಏಳರ ಹರೆಯದಲ್ಲಿ ಮೊಸಳೆಯಿಂದ ತುಂಬಿದ್ದ ಸರೋವರ ದಾಟಿ ದೇವಾಲಯದಲ್ಲಿ ಧ್ವಜಾರೋಹಣ ಮಾಡಿರುವುದು ಇತ್ಯಾದಿ.

ಎರಡನೇ ಅಧ್ಯಾಯದಲ್ಲಿ ದೇಶ ಸೇವೆಯನ್ನು ಮಾಡಲು ಬಯಸಿದ್ದ ಯುವ ಮೋದಿ ಸಂತನಾಗಲೋ ಅಥವಾ ಸೈನಿಕನಾಗಲೋ ಎಂಬ ಗೊಂದಲದಲ್ಲಿದ್ದ ಕ್ಷಣಗಳು. ಹಿಮಾಲಯದಲ್ಲಿ ಅವರ ತಿರುಗಾಟ ಮತ್ತು ಬರಹದಲ್ಲಿ ಅವರಿಗಿದ್ದ ಆಸಕ್ತಿಯ ಬಗ್ಗೆ ತಿಳಿಸಲಾಗಿದೆ. ಮೂರನೇ ಅಧ್ಯಯದಲ್ಲಿ ಗುಜರಾತ್ ಮತ್ತು ಮೋದಿಯ ವಿವರಣೆಯಿದೆ. ಮೋದಿ ಮುಖ್ಯಮಂತ್ರಿಯಾದ ನಂತರ ಗುಜರಾತ್‌ನಲ್ಲಿ ಆದ ಬದಲಾವಣೆಗಳು, ಅದರ ಆರ್ಥಿಕ ಪ್ರಗತಿ, ಹೊಸ ಆಡಳಿತಗಾರನಾದರೂ 2001ರ ಭೂಕಂಪದ ಸಂದರ್ಭವನ್ನು ನಿಬಾಯಿಸಿದ್ದ ರೀತಿ ಎಲ್ಲವೂ ಈ ಭಾಗದಲ್ಲಿದೆ. ಅಂತಿಮ ಅಧ್ಯಾಯದಲ್ಲಿ 2014ರಿಂದೀಚೆಗಿನ ಮೋದಿಯ ಬಗ್ಗೆ ವಿವರಿಸಲಾಗಿದೆ. 2014ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಮತ್ತು ಅವರು ಪರಿಚಯಿಸಿದ ಹಲವು ಪ್ರಥಮಗಳು, ಸ್ವಚ್ಛ ಭಾರತ ಅಭಿಯಾನ, ಕಪ್ಪು ಹಣದ ವಿರುದ್ಧ ಹೋರಾಟ, ಪ್ರತಿಗ್ರಾಮಕ್ಕೆ ವಿದ್ಯತ್ ಸಂಪರ್ಕ ಇತ್ಯಾದಿಗಳ ಬಗ್ಗೆ ವಿವರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News