ಕಾಶ್ಮೀರ ವಿಷಯದಲ್ಲಿ ಭಾರತವನ್ನು ಬೆಂಬಲಿಸಿದ ಐರೋಪ್ಯ ಸಂಸದರು

Update: 2019-09-18 16:26 GMT

ಬ್ರಸೆಲ್ಸ್ (ಬೆಲ್ಜಿಯಂ), ಸೆ. 18: ಐರೋಪ್ಯ ಸಂಸತ್ತಿನ ಪೂರ್ಣಾಧಿವೇಶನದಲ್ಲಿ ನಡೆದ ವಿಶೇಷ ಚರ್ಚೆಯಲ್ಲಿ ಐರೋಪ್ಯ ಸಂಸದರಾದ ರೈಸ್‌ಝಾರ್ಡ್ ಝಾರ್ನೆಕಿ ಮತ್ತು ಫಲ್ವಿಯೊ ಮಾರ್ಟುಸೀಲೊ ಕಾಶ್ಮೀರ ವಿಷಯದಲ್ಲಿ ಭಾರತವನ್ನು ಬೆಂಬಲಿಸಿದ್ದಾರೆ. ಭಾರತ ಶ್ರೇಷ್ಠ ಪ್ರಜಾಪ್ರಭುತ್ವ ಎಂದು ಬಣ್ಣಿಸಿದ ಅವರು, ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿರುವುದಕ್ಕಾಗಿ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಾಶ್ಮೀರದ ಬಗ್ಗೆ ಮಂಗಳವಾರ ನಡೆದ ಚರ್ಚೆಯಲ್ಲಿ ಭಾಗವಹಿಸಿದ ಐರೋಪ್ಯ ಸಂಸತ್ತು ಮತ್ತು ಪೋಲ್ಯಾಂಡ್‌ನ ಯರೋಪಿಯನ್ ಕನ್ಸರ್ವೇಟಿವ್ಸ್ ಆ್ಯಂಡ್ ರಿಫಾರ್ಮಿಸ್ಟ್ ಗ್ರೂಪ್‌ನ ಸದಸ್ಯ ಝಾರ್ನೆಕಿ, ಭಾರತ ಜಗತ್ತಿನ ಅತ್ಯಂತ ಶ್ರೇಷ್ಠ ಪ್ರಜಾಸತ್ತೆಯಾಗಿದೆ ಎಂದು ಬಣ್ಣಿಸಿದರು.

‘‘ಭಾರತ ಜಗತ್ತಿನ ಅತಿ ಶ್ರೇಷ್ಠ ಪ್ರಜಾಸತ್ತೆಯಾಗಿದೆ. ಭಾರತ, ಅದರಲ್ಲೂ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಭಯೋತ್ಪಾದಕ ಕೃತ್ಯಗಳ ಬಗ್ಗೆ ನಾವು ಗಮನ ಹರಿಸಬೇಕಾಗಿದೆ. ಈ ಭಯೋತ್ಪಾದಕರು ಚಂದ್ರನಿಂದ ಇಳಿದು ಬಂದವರಲ್ಲ. ಅವರು ನೆರೆಯ ದೇಶದಿಂದ ಬಂದವರು. ನಾವು ಭಾರತವನ್ನು ಬೆಂಬಲಿಸಬೇಕು’’ ಎಂದು ಝಾರ್ನೆಕಿ ಹೇಳಿದರು.

ಇಟಲಿಯ ಗ್ರೂಪ್ ಆಫ್ ಯುರೋಪಿಯನ್ ಪೀಪಲ್ಸ್ ಪಾರ್ಟಿ (ಕ್ರಿಶ್ಚಿಯನ್ ಡೆಮಾಕ್ರಟ್ಸ್)ಯ ಸದಸ್ಯರೂ ಆಗಿರುವ ಐರೋಪ್ಯ ಸಂಸತ್ ಸದಸ್ಯ ಮಾರ್ಟುಸೀಲೊ, ಪಾಕಿಸ್ತಾನ ಪರಮಾಣು ಅಸ್ತ್ರಗಳನ್ನು ಬಳಸುವ ಬೆದರಿಕೆಯನ್ನು ಹಾಕಿದ್ದು, ಇದು ಐರೋಪ್ಯ ಒಕ್ಕೂಟಕ್ಕೆ ಕಳವಳದ ಸಂಗತಿಯಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News