'ಮಹಾ' ಕದನಕ್ಕೆ ಕಾಂಗ್ರೆಸ್ ಸಿದ್ಧ: ಅಭ್ಯರ್ಥಿಗಳ ಮೊದಲ ಪಟ್ಟಿ ಇಂದು ಬಿಡುಗಡೆ

Update: 2019-09-20 03:41 GMT

ಮುಂಬೈ, ಸೆ.20: ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಸಜ್ಜಾಗಿದ್ದು, 104 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಲಿದೆ. ಮಾಜಿ ಮುಖ್ಯಮಂತ್ರಿಗಳಾದ ಅಶೋಕ್ ಚವ್ಹಾಣ್ ಹಾಗೂ ಪೃಥ್ವಿರಾಜ್ ಚವ್ಹಾಣ್, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಾಳಾ ಸಾಹೇಬ್ ಥೋರಟ್ ಅವರ ಹೆಸರುಗಳು ಮೊದಲ ಪಟ್ಟಿಯಲ್ಲಿ ಸೇರಿವೆ.

ರಾಜ್ಯ ವಿಧಾನಸಭೆಯ 288 ಸ್ಥಾನಗಳ ಪೈಕಿ ಕಾಂಗ್ರೆಸ್ ಹಾಗೂ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ತಲಾ 125 ಸ್ಥಾನಗಳಿಗೆ ಸ್ಪರ್ಧಿಸುತ್ತಿದ್ದು, 38 ಸ್ಥಾನಗಳನ್ನು ಸಮಾಜವಾದಿ ಪಕ್ಷ, ರಾಜು ಶೆಟ್ಟಿಯವರ ಸ್ವಾಭಿಮಾನಿ ಶೇಟ್ಕರಿ ಸಂಘಟನೆ ಮತ್ತು ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ ಸೇರಿದಂತೆ ಇತರ ಸಣ್ಣ ಪಕ್ಷಗಳಿಗೆ ಬಿಟ್ಟುಕೊಟ್ಟಿವೆ.

ಆದರೆ ಪ್ರಕಾಶ್ ಅಂಬೇಡ್ಕರ್ ನೇತೃತ್ವದ ವಂಚಿತ್ ಬಹುಜನ ಅಗಾಡಿ (ವಿಬಿಎ) ಜತೆಗಿನ ಮೈತ್ರಿ ಸಾಧ್ಯತೆಯನ್ನು ಕಾಂಗ್ರೆಸ್ ಅಲ್ಲಗಳೆದಿದೆ. ಎನ್‌ಸಿಪಿ ಜತೆಗಿನ ದೀರ್ಘಾವಧಿ ಮೈತ್ರಿಯನ್ನು ಮುರಿದುಕೊಳ್ಳಬೇಕು ಎಂಬ ಸ್ವೀಕಾರಾರ್ಹವಲ್ಲದ ಹಾಗೂ ಅತಾರ್ಕಿಕ ಬೇಡಿಕೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.

ಆಡಳಿತಾರೂಢ ಬಿಜೆಪಿ ಹಾಗೂ ಶಿವಸೇನೆ ಇನ್ನೂ ತಮ್ಮ ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಪಡಿಸಿಲ್ಲ.
ಇಬ್ಬರು ಮಾಜಿ ಮುಖ್ಯಮಂತ್ರಿಗಳು ಹಾಗೂ ಥೋರಟ್ ಅವರ ಜತೆಗೆ ಸಿಎಲ್‌ಪಿ ನಾಯಕ ಕೆ.ಸಿ.ಪಡವಿ ಮತ್ತು ವಿರೋಧ ಪಕ್ಷದ ಮುಖಂಡ ವಿಜಯ ನಾಮದೇವರಾವ್ ವಡೆಟ್ಟಿವರ್ ಅವರ ಹೆಸರುಗಳನ್ನು ಕೂಡಾ ಕಾಂಗ್ರೆಸ್ ಹೈಕಮಾಂಡ್ ಅಂತಿಮಗೊಳಿಸಿದೆ. ಆದರೆ ಹಿರಿಯ ಮುಖಂಡರಾದ ಸುಶೀಲ್ ಕುಮಾರ್ ಶಿಂಧೆ, ಮಿಲಿಂದ್ ದಿಯೋರಾ, ಸಂಜಯ್ ನಿರುಪಮ್ ಮತ್ತು ನಾನಾ ಪಟೋಲೆ ಅವರ ಹೆಸರನ್ನು ಪಕ್ಷ ಪರಿಗಣಿಸಿಲ್ಲ.

ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಹಾಗೂ ಎನ್‌ಸಿಪಿಯ ಹಿರಿಯ ನಾಯಕರು ಆಡಳಿತಾರೂಢ ಮೈತ್ರಿಕೂಟದತ್ತ ಪಕ್ಷಾಂತರ ಮಾಡಿರುವ ಹಿನ್ನೆಲೆಯಲ್ಲಿ ಉಭಯ ಪಕ್ಷಗಳಿಗೆ ಇದು ಮಹತ್ವದ ಚುನಾವಣೆಯಾಗಿದೆ.

288 ಸದಸ್ಯಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 42 ಹಾಗೂ ಎನ್‌ಸಿಪಿ 41 ಶಾಸಕರನ್ನು ಹೊಂದಿದೆ. ಬಿಜೆಪಿ 122 ಹಾಗೂ ಶಿವಸೇನೆ 63 ಸ್ಥಾನಗಳನ್ನು ಹೊಂದಿವೆ. ಇತ್ತೀಚೆಗೆ ಮುಕ್ತಾಯವಾದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-23, ಶಿವಸೇನೆ-18, ಎನ್‌ಸಿಪಿ-4 ಹಾಗೂ ಕಾಂಗ್ರೆಸ್-1 ಸ್ಥಾನ ಗೆದ್ದಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News