ಆಸ್ಪತ್ರೆಯ ನಿರ್ಲಕ್ಷ್ಯದಿಂದ ಯುವಕ ಮೃತ್ಯು: ಹೆತ್ತವರಿಗೆ 20 ಲ.ರೂ.ಪರಿಹಾರ ನೀಡಲು ಆದೇಶ

Update: 2019-09-20 14:24 GMT

ಹೊಸದಿಲ್ಲಿ,ಸೆ.20: ರೋಗಿಗಳ ಬಗ್ಗೆ ಮಾನವೀಯತೆಯನ್ನು ಹೊಂದಿರುವುದು ಆಸ್ಪತ್ರೆಗಳ ಕರ್ತವ್ಯವಾಗಿದೆ ಮತ್ತು ಅವು ಅದನ್ನು ಪಾಲಿಸುವ ಅಗತ್ಯವಿದೆ ಎಂದು ದಿಲ್ಲಿ ರಾಜ್ಯ ಬಳಕೆದಾರರ ಆಯೋಗವು ಹೇಳಿದೆ. 2003ರಲ್ಲಿ ವೈದ್ಯಕೀಯ ನಿರ್ಲಕ್ಷದಿಂದ ಸಾವನ್ನಪ್ಪಿದ್ದ ದಿಲ್ಲಿ ನಿವಾಸಿಯ ಹೆತ್ತವರಿಗೆ 20 ಲ.ರೂ.ಗಳ ಪರಿಹಾರವನ್ನು ನೀಡುವಂತೆ ಇಲ್ಲಿಯ ಶಾಂತಿ ಮುಕುಂದ ಆಸ್ಪತ್ರೆಗೆ ಅದು ಆದೇಶಿಸಿದೆ.

2003,ಅ.15ರಂದು ಸೌಮ್ಯ ಜ್ವರದಿಂದ ಬಳಲುತ್ತಿದ್ದ ವಿಶಾಲ ಶರ್ಮಾನನ್ನು ಶಾಂತಿ ಮುಕುಂದ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಡಾ.ಅನಿಲ ಚತುರ್ವೇದಿ ಅವರು ಚಿಕಿತ್ಸೆಯ ಹೊಣೆಯನ್ನು ವಹಿಸಿಕೊಂಡಿದ್ದರು. ಶರ್ಮಾ ಡೆಂಗ್ ಜ್ವರದಿಂದ ನರಳುತ್ತಿರಬಹುದೆಂದು ಆಸ್ಪತ್ರೆಯ ಕೇಸ್ ಶೀಟ್ ತೋರಿಸುತ್ತಿದ್ದರೂ ಆತ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಮೂರು ಗಂಟೆಗಳ ಬಳಿಕವಷ್ಟೇ ಪ್ರಾಥಮಿಕ ಅಗತ್ಯವಾಗಿದ್ದ ಪ್ಲೇಟ್‌ಲೆಟ್ ಕೌಂಟ್ ಪರೀಕ್ಷೆಯನ್ನು ನಡೆಸಲಾಗಿತ್ತು ಮತ್ತು ಆಸ್ಪತ್ರೆಯ ಈ ನಿರ್ಲಕ್ಷದಿಂದಾಗಿ ಶರ್ಮಾ ಅದೇ ದಿನ ಕೊನೆಯುಸಿರೆಳೆದಿದ್ದ ಎಂದು ಹೆತ್ತವರು ತಮ್ಮ ದೂರಿನಲ್ಲಿ ಆರೋಪಿಸಿದ್ದರು.

ಪುತ್ರನ ಸಾವಿನಿಂದಾಗಿ ಹೆತ್ತವರು ಅನುಭವಿಸಿದ ನೋವು ಮತ್ತು ಸಂಕಟಕ್ಕಾಗಿ ಅವರಿಗೆ ಎರಡು ತಿಂಗಳಲ್ಲಿ 20 ಲ.ರೂ.ಗಳ ಪರಿಹಾರವನ್ನು ನೀಡುವಂತೆ ಶಾಂತಿ ಮುಕುಂದ ಆಸ್ಪತ್ರೆಗೆ ಆದೇಶಿಸಿರುವ ಆಯೋಗವು,ಈ ದಂಡವು ‘ಮಾನವ ಜೀವಿಗಳಾಗಿ ಮಾನವ ಜೀವಿಗಳಿಗೆ’ ಸೇವೆಯನ್ನು ಒದಗಿಸುವಂತಾಗಲು ಆಸ್ಪತ್ರೆಗಳ ಧೋರಣೆಯಲ್ಲಿ ಗುಣಾತ್ಮಕ ಬದಲಾವಣೆಗಳನ್ನು ತರುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದೆ.

ಮಾನವೀಯತೆ ಅಗತ್ಯ. ಅದು ವೈದ್ಯರು ಮತ್ತು ಆಸ್ಪತ್ರೆಗಳ ನೀತಿ ಸಂಹಿತೆಯಾಗಿದೆ ಮತ್ತು ಅದು ಅವರ ಕರ್ತವ್ಯವಾಗಿದೆ. ಅದನ್ನು ಅವರು ಪಾಲಿಸುವುದು ಅಗತ್ಯವಾಗಿದೆ. ಸಂವಿಧಾನದ ವಿಧಿ 21ರಡಿ ವೈಯಕ್ತಿಕ ಸ್ವಾತಂತ್ರವನ್ನು ಖಚಿತಪಡಿಸಲಾಗಿರುವುದರಿಂದ ಇದು ಇನ್ನಷ್ಟು ಅಗತ್ಯವಾಗಿದೆ ಎಂದು ಆಯೋಗವು ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News