ಅಕ್ರಮ ಹಣ ವರ್ಗಾವಣೆ ದೇಶದ ಸಮಗ್ರತೆಗೆ ಗಂಭೀರ ಬೆದರಿಕೆ: ನ್ಯಾಯಾಲಯ

Update: 2019-09-20 14:27 GMT

ಹೊಸದಿಲ್ಲಿ,ಸೆ.20: ಅಕ್ರಮ ಹಣ ವರ್ಗಾವಣೆಯು ದೇಶದ ಹಣಕಾಸು ವ್ಯವಸ್ಥೆಗೆ ಮಾತ್ರವಲ್ಲ,ಅದರ ಸಮಗ್ರತೆ ಮತ್ತು ಸಾರ್ವಭೌಮತ್ವಕ್ಕೂ ಗಂಭೀರ ಬೆದರಿಕೆಯನ್ನೊಡ್ಡುತ್ತಿದೆ ಎಂದು ದಿಲ್ಲಿಯ ವಿಶೇಷ ನ್ಯಾಯಾಲಯವು ಹೇಳಿದೆ.

ಹುಲಿಯ ಅಂಗಾಂಗಗಳ ಕಳ್ಳಸಾಗಾಣಿಕೆಗಾಗಿ ವ್ಯಕ್ತಿಯೋರ್ವನಿಗೆ ನಾಲ್ಕು ವರ್ಷಗಳ ಕಠಿಣ ಜೈಲುಶಿಕ್ಷೆ ಮತ್ತು 10,000 ರೂ.ದಂಡವನ್ನು ವಿಧಿಸಿದ ಸಂದರ್ಭದಲ್ಲಿ ನ್ಯಾಯಾಲಯವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ)ಯನ್ನು ಅಪರಾಧಗಳ ಮೂಲಕ ಗಳಿಸಲಾದ ಹಣದ ಅಕ್ರಮ ಹಣ ವರ್ಗಾವಣೆಯ ಸವಾಲನ್ನು ಎದುರಿಸಲು ಜಾಗತಿಕ ಸಮುದಾಯವು ತೆಗೆದುಕೊಂಡಿರುವ ಉಪಕ್ರಮಗಳ ಮಾದರಿಯಲ್ಲಿ ಜಾರಿಗೊಳಿಸಲಾಗಿದೆ ಎಂದೂ ವಿಶೇಷ ನ್ಯಾಯಾಧೀಶ ಸಂತೋಷಸ್ನೇಹಿ ಮಾನ್ ಹೇಳಿದ್ದಾರೆ.

2013,ಸೆ.7ರಂದು ಕಾರಿನಲ್ಲಿ ಹುಲಿಯ ಅಂಗಾಂಗಗಳ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಸೂರಜಪಾಲ್,ಸೂರಜಭಾನ್ ಮತ್ತು ನರೇಶ ಎನ್ನುವವರನ್ನು ಪೊಲೀಸರು ಬಂಧಿಸಿದ್ದರು. ಅವರು ಸೀಟಿನಡಿ ಬಚ್ಚಿಟ್ಟು ಸಾಗಿಸುತ್ತಿದ್ದ 2.7 ಲ.ರೂ.ಅಕ್ರಮ ಹಣವೂ ಪತ್ತೆಯಾಗಿತ್ತು. ವನ್ಯಜೀವಿ ರಕ್ಷಣೆ ಕಾಯ್ದೆ ಮತ್ತು ಪಿಎಂಎಲ್‌ಎ ಅಡಿ ಅವರ ವಿರುದ್ಧ ಆರೋಪಗಳನ್ನು ಹೊರಿಸಲಾಗಿತ್ತು.

ಹುಲಿಯ ಅಂಗಾಂಗಗಳ ಖರೀದಿಗಾಗಿ ತಾನು ಸೂರಜಪಾಲ್‌ನಿಂದ ಹಣ ಸ್ವೀಕರಿಸಿದ್ದನ್ನು ಸೂರಜಭಾನ್ ಒಪ್ಪಿಕೊಂಡಿದ್ದ. ಸೂರಜಪಾಲ್ ವಿಚಾರಣೆಯ ಅವಧಿಯಲ್ಲಿ ಮೃತಪಟ್ಟಿದ್ದರೆ ನರೇಶ ನ್ಯಾಯಾಲಯದಿಂದ ಖುಲಾಸೆಗೊಂಡಿದ್ದ.

ಸೂರಜಪಾಲ್ ಸೂರಜಭಾನ್‌ಗೆ ನೀಡಿದ್ದ ಹಣವು ಅಕ್ರಮ ವನ್ಯಜೀವಿ ವ್ಯಾಪಾರದಿಂದ ಗಳಿಸಿದ್ದ ಅಪರಾಧದ ಹಣವಾಗಿತ್ತು ಎನ್ನುವುದು ರುಜುವಾತಾಗಿದೆ ಎಂದು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಹೇಳಿದೆ.

ಸೂರಜಭಾನ್ ಈಗಾಗಲೇ ತನ್ನ ಶಿಕ್ಷೆಯ ಅವಧಿಗಿಂತ ಹೆಚ್ಚಿನ ಸಮಯವನ್ನು ಜೈಲಿನಲ್ಲಿ ಕಳೆದಿರುವುದರಿಂದ ಮತ್ತು ಆತ ಬೇರೆ ಯಾವುದೇ ಪ್ರಕರಣದಲ್ಲಿ ಅಪೇಕ್ಷಿತ ಆರೋಪಿಯಲ್ಲದಿದ್ದರೆ ದಂಡದ ಹಣವನ್ನು ಕಟ್ಟಿಸಿಕೊಂಡು ಆತನನ್ನು ತಕ್ಷಣವೇ ಬಿಡುಗಡೆಗೊಳಿಸುವಂತೆ ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News