ಪಿಎಚ್‌ಡಿಯಲ್ಲಿ ಮೀಸಲಾತಿ ಕಡೆಗಣನೆ: ಆರೋಪ

Update: 2019-09-20 15:08 GMT

ಹೊಸದಿಲ್ಲಿ,ಸೆ.20: ಗುಜರಾತ್‌ನ ಅಹ್ಮದಾಬಾದ್‌ನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂ) ನಲ್ಲಿ ಕಳೆದ ವಾರ ಪಿಎಚ್‌ಡಿ ಕೋರ್ಸ್‌ಗೆ ಅರ್ಜಿಗಳನ್ನು ಆಹ್ವಾನಿಸಿದಾಗ ಅದರಲ್ಲಿ ಎಸ್ಸಿ, ಎಸ್ಟಿ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿಯ ಕುರಿತು ಯಾವುದೇ ಉಲ್ಲೇಖ ಇಲ್ಲದಿರುವುದು ಸಂಸ್ಥೆಯ ಸಿಬ್ಬಂದಿ ಮತ್ತು ಹಳೆ ವಿದ್ಯಾರ್ಥಿಗಳ ಒಂದು ವಿಭಾಗದಿಂದ ತೀವ್ರ ವಿರೋಧಕ್ಕೆ ಗ್ರಾಸವಾಗಿದೆ.

ಎಲ್ಲ ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಪ್ರತಿಯೊಂದು ಕೋರ್ಸ್‌ಗೆ ಮತ್ತು ಅಧ್ಯಯನ ವಿಭಾಗಗಳಲ್ಲಿ ಮೀಸಲಾತಿ ಒದಗಿಸಬೇಕು ಎಂಬ ಕೇಂದ್ರೀಯ ಶಿಕ್ಷಣ ಸಂಸ್ಥೆಗಳು (ದಾಖಲಾತಿಯಲ್ಲಿ ಮೀಸಲಾತಿ) ಕಾಯ್ದೆ 2006ಅನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಸಂಸ್ಥೆಯ ವಿರುದ್ಧ ಕೆಲವು ಸಿಬ್ಬಂದಿ ಮತ್ತು ಹಳೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೀಸಲಾತಿ ಜಾರಿಗೊಳಿಸದೆ ಇರುವುದರಿಂದ ಸಂಸ್ಥೆಯು ಐಐಎಂ ಕಾಯ್ದೆ, 2017ನ್ನೂ ಉಲ್ಲಂಘಿಸಿದೆ ಎಂದು ಅವರು ಆರೋಪಿಸಿದ್ದಾರೆ.

ಕೇಂದ್ರೀಯ ಶಿಕ್ಷಣ ಸಂಸ್ಥೆಗಳು (ದಾಖಲಾತಿಯಲ್ಲಿ ಮೀಸಲಾತಿ) ಕಾಯ್ದೆ, 2016ರ ಉದ್ದೇಶಕ್ಕಾಗಿ ಎಲ್ಲ ಐಐಎಂಗಳನ್ನು (ಐಐಎಂಎ ಕೋರ್ಸ್ ಸೇರಿದಂತೆ) ಕೇಂದ್ರೀಯ ಶಿಕ್ಷಣ ಸಂಸ್ಥೆಗಳೆಂದು ಪರಿಗಣಿಸಲಾಗುತ್ತದೆ ಎಂದು ಐಐಎಂ ಕಾಯ್ದೆ ಸ್ಪಷ್ಟವಾಗಿ ತಿಳಿಸಿದೆ. ಕೇಂದ್ರೀಯ ಶಿಕ್ಷಣ ಸಂಸ್ಥೆಗಳು (ದಾಖಲಾತಿಯಲ್ಲಿ ಮೀಸಲಾತಿ) ಕಾಯ್ದೆ, 2016ರ 3ನೇ ವಿಧಿಯ ಪ್ರಕಾರ, ಎಲ್ಲ ಕೇಂದ್ರೀಯ ಶಿಕ್ಷಣ ಸಂಸ್ಥೆಗಳು (ಐಐಎಂಎಯೂ ಸೇರಿ) ಎಲ್ಲ ಅಧ್ಯಯನ ವಿಭಾಗಗಳಲ್ಲಿ ಐತಿಹಾಸಿಕವಾಗಿ ಸಮಾಜದ ಸೌಲಭ್ಯವಂಚಿತ ಗುಂಪುಗಳಿಗಾಗಿ ಸ್ಥಾನಗಳನ್ನು ಮೀಸಲಿಡಬೇಕು ಎಂದು ಈ ಕುರಿತು ಐಐಎಂ ಅಹ್ಮದಾಬಾದ್‌ನ ನಿರ್ದೇಶಕರಿಗೆ ಬಹಿರಂಗ ಪತ್ರಬರೆದ ಐಐಎಂ ಬೆಂಗಳೂರಿನ ವಿದ್ಯಾರ್ಥಿ ಸಿದ್ಧಾರ್ಥ್ ಜೋಶಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News