ಕಾರ್ಪೊರೇಟ್ ತೆರಿಗೆ ಏರಿಸಿ, ಇಳಿಸಿ ನಿಮ್ಮ ಬೆನ್ನನ್ನು ನೀವೇ ತಟ್ಟುತ್ತಿದ್ದೀರಿ: ಮೋದಿಯನ್ನು ಕುಟುಕಿದ ಕಾಂಗ್ರೆಸ್

Update: 2019-09-20 16:09 GMT

ಹೊಸದಿಲ್ಲಿ,ಸೆ.20: ಕಾರ್ಫೊರೇಟ್ ತೆರಿಗೆ ಕಡಿತಗೊಳಿಸಿರುವ ಸರಕಾರದ ಕ್ರಮದಿಂದ ಶೇರು ಮಾರುಕಟ್ಟೆಯಲ್ಲಿ ಉಂಟಾಗಿರುವ ಏರಿಕೆ ಮತ್ತು ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿರುವ ಬಹುನಿರೀಕ್ಷಿತ ‘ಹೌಡಿ ಮೋದಿ’ ಕಾರ್ಯಕ್ರಮದ ನಡುವಿನ ಸಮಯದ ಸಾಮ್ಯತೆಯ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಸೆಪ್ಟಂಬರ್ 22ರ ರವಿವಾರ ಅಮೆರಿಕದ ಟೆಕ್ಸಾಸ್‌ನಲ್ಲಿ ನಡೆಯಲಿರುವ ಹೌಡಿ ಮೋದಿ ಕಾರ್ಯಕ್ರಮದ ಆಯೋಜಕರು, ಅಮೆರಿಕದಲ್ಲಿ ವಿದೇಶಿ ನಾಯಕನಿಗಾಗಿ ಆಯೋಜಿಸಲ್ಪಟ್ಟಿರುವ ಅತ್ಯಂತ ಬೃಹತ್ ಮಟ್ಟದ ಮತ್ತು ಅತೀಹೆಚ್ಚು ಜನರು ಸೇರಲಿರುವ ಕಾರ್ಯಕ್ರಮ ಇದಾಗಲಿದೆ ಎಂದು ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, “ಹೌಡಿ ಮೋದಿ ಜಂಬೋರಿ (ಉತ್ಸವ)ಯ ಸಮಯದಲ್ಲಿ ಶೇರು ಮಾರುಕಟ್ಟೆ ಏರಿಕೆಗೆ ಪ್ರಧಾನಿಯವರು ಏನೂ ಮಾಡಲು ಸಿದ್ಧ ಎನ್ನುವುದು ನೋಡುವಾಗ ಆಶ್ಚರ್ಯವಾಗುತ್ತದೆ. 1.4 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ನಡೆಯಲಿರುವ ಈ ಕಾರ್ಯಕ್ರಮ ಜಗತ್ತಿನ ಅತ್ಯಂತ ದುಬಾರಿ ಕಾರ್ಯಕ್ರಮವಾಗಿದೆ! ಆದರೆ ಹೌಡಿ ಮೋದಿ ಯು ಭಾರತವನ್ನು ತಳ್ಳಿರುವ ಆರ್ಥಿಕ ಅಧಃಪತನದ ವಾಸ್ತವವನ್ನು ಯಾವುದೇ ಕಾರ್ಯಕ್ರಮದಿಂದ ಮರೆಮಾಚಲು ಸಾಧ್ಯವಿಲ್ಲ” ಎಂದು ಕಿಡಿಕಾರಿದ್ದಾರೆ.

 ರಾಹುಲ್ ಗಾಂಧಿ ಟ್ವೀಟ್‌ಗೆ ಬೆಂಬಲವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಪ್ರಧಾನಿಯನ್ನುದ್ದೇಶಿಸಿ ಟ್ವೀಟ್ ಮಾಡಿದ್ದು, 2019ರ ನಿಮ್ಮ ಬಜೆಟ್‌ನಲ್ಲಿ ವಿರೋಧಗಳ ಮಧ್ಯೆಯೂ ಕಾರ್ಪೊರೇಟ್ ತೆರಿಗೆಯನ್ನು ಶೇ.30ಕ್ಕೆ ಏರಿಸಲಾಗಿತ್ತು. ಇದೀಗ ಮತ್ತೊಮ್ಮೆ ಯು ಟರ್ನ್ ಹೊಡೆದಿರುವ ವಿತ್ತ ಸಚಿವರು ದರ ಕಡಿತಗೊಳಿಸಿದ್ದು ನೀವು ನಿಮ್ಮ ಬೆನ್ನನ್ನೇ ತಟ್ಟುತ್ತಿದ್ದೀರಿ ಮತ್ತು ಇದೊಂದು ಐತಿಹಾಸಿಕ ಕ್ರಮ ಎಂದು ಹೇಳುತ್ತಿದ್ದೀರಿ. ಆದರೆ ಒಂದೇ ಒಂದು ಐತಿಹಾಸಿಕ ವಿಷಯವೆಂದರೆ, ಸಮೃದ್ಧ ಆರ್ಥಿಕತೆಯನ್ನು ನಾಶಗೊಳಿಸಿದ ಹೊಣೆಯನ್ನು ಸರಕಾರ ಹೊರಲು ನಿರಾಕರಿಸುವುದಾಗಿದೆ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News