ಈ.ಡಿ.ಗೆ ನೀಡಿರುವ ತನ್ನ ಹೇಳಿಕೆಗಳ ಪ್ರತಿ ಕೋರಿದ ಡಿಕೆಶಿಯ ಅರ್ಜಿ ವಿಚಾರಣೆ ಸೆ.26ಕ್ಕೆ ನಿಗದಿ

Update: 2019-09-20 16:20 GMT

ಹೊಸದಿಲ್ಲಿ,ಸೆ.20: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಯವು ದಾಖಲಿಸಿಕೊಂಡಿರುವ ತನ್ನ ಹೇಳಿಕೆಗಳ ಪ್ರತಿಯನ್ನು ಕೋರಿ ಕಾಂಗ್ರೆಸ್ ನಾಯಕ ಹಾಗೂ ಶಾಸಕ ಡಿ.ಕೆ.ಶಿವಕುಮಾರ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸೆ.26ರಂದು ನಡೆಸುವುದಾಗಿ ದಿಲ್ಲಿ ಉಚ್ಚ ನ್ಯಾಯಾಲಯವು ಶುಕ್ರವಾರ ತಿಳಿಸಿದೆ.

ಪ್ರಕರಣದಲ್ಲಿ ವಾದಿಸಬೇಕಾದ ಹಿರಿಯ ವಕೀಲರು ಅಲಭ್ಯರಾಗಿದ್ದಾರೆ ಎಂದು ಡಿಕೆಶಿ ಪರ ವಕೀಲರು ತಿಳಿಸಿದ ನಂತರ ನ್ಯಾ.ಬೃಜೇಶ ಸೇಠಿ ಅವರು ವಿಚಾರಣೆಯನ್ನು ಸೆ.26ಕ್ಕೆ ನಿಗದಿಗೊಳಿಸಿದರು. ತನ್ನ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅನ್ವಯ ಆರೋಪಗಳನ್ನು ಹೊರಿಸಲು ಈ.ಡಿ.ಗೆ ಅಧಿಕಾರ ವ್ಯಾಪ್ತಿಯಿಲ್ಲ ಎನ್ನುವುದನ್ನು ಎತ್ತಿ ಹಿಡಿಯುವಂತೆಯೂ ಡಿಕೆಶಿ ನ್ಯಾಯಾಲಯವನ್ನು ಕೋರಿದ್ದಾರೆ.

ಈ.ಡಿ.ಸಹಾಯಕ ನಿರ್ದೇಶಕರು ತನ್ನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಪಿಎಂಎಲ್‌ಎ ಕಲಂ 50ರಡಿ ಈ.ಡಿ.ಯ ನಿರ್ದೇಶಕರು ಮಾತ್ರ ಹೇಳಿಕೆಗಳನ್ನು ದಾಖಲಿಸಿಕೊಳ್ಳಬಹುದಾಗಿದೆ. ಆದ್ದರಿಂದ ತನ್ನ ಪ್ರಕರಣದಲ್ಲಿ ಬೇರೆ ಅಧಿಕಾರಿ ದಾಖಲಿಸಿಕೊಂಡಿರುವ ಹೇಳಿಕೆಗಳನ್ನು ದಾಖಲೆಗಳಿಂದ ತೆಗೆಯಬೇಕು ಎಂದೂ ಡಿಕೆಶಿ ಉಚ್ಚ ನ್ಯಾಯಾಲಯವನ್ನು ಕೋರಿಕೊಂಡಿದ್ದಾರೆ.

ಪಿಎಂಎಲ್‌ಎ ಅಡಿ ಹೇಳಿರುವಂತೆ ಯಾವುದೇ ರೀತಿಯಲ್ಲಿಯೂ ತನಗೂ ಅಕ್ರಮ ಹಣ ವರ್ಗಾವಣೆಗೂ ತಳುಕು ಹಾಕುವಂತಿಲ್ಲ ಎಂದು ಅರ್ಜಿಯಲ್ಲಿ ಹೇಳಿರುವ ಅವರು,ಬಾಹ್ಯ ಕಾರಣಗಳಿಂದಾಗಿ ಈ.ಡಿ.ಅಧಿಕಾರಿಗಳು ತನಗೆ ಕಿರುಕುಳ ನೀಡಲು ತನ್ನ ವಿರುದ್ಧ ಅಪರಾಧವನ್ನು ಆರೋಪಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ತನ್ನ ವಿರುದ್ಧ ತನಿಖೆಯಲ್ಲಿ ರಾಜಕೀಯ ತಾರತಮ್ಯವಿದೆ ಎಂದು ಆಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News