ಮೊಬೈಲ್ ಬಳಕೆಯನ್ನು ನಿಷೇಧಿಸಿದ್ದ ಹಾಸ್ಟೆಲ್ ನಿಯಮ ಕೇರಳ ಹೈಕೋರ್ಟ್‌ನಿಂದ ರದ್ದು

Update: 2019-09-20 16:51 GMT

 ಕೊಚ್ಚಿ,ಸೆ.20: ಕೇರಳ ಉಚ್ಚ ನ್ಯಾಯಾಲಯವು ಮಹತ್ವದ ತೀರ್ಪೊಂದರಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಿದ್ದ ನಿಯಮವನ್ನು ವಿರೋಧಿಸಿದ್ದಕ್ಕಾಗಿ ಕಾಲೇಜ್ ಹಾಸ್ಟೆಲ್‌ನಿಂದ ಉಚ್ಚಾಟಿಸಲ್ಪಟ್ಟಿದ್ದ ವಿದ್ಯಾರ್ಥಿನಿಗೆ ಮರುಪ್ರವೇಶ ನೀಡುವಂತೆ ಆದೇಶಿಸಿದೆ. ಅಂತರ್ಜಾಲ ಸೌಲಭ್ಯವನ್ನು ಪಡೆಯುವ ಹಕ್ಕು ಸಂವಿಧಾನದಡಿ ಶಿಕ್ಷಣ ಹಕ್ಕು ಮತ್ತು ಖಾಸಗಿತನ ಹಕ್ಕುಗಳ ಭಾಗವಾಗಿದೆ ಎಂದು ಅದು ಹೇಳಿದೆ.

ವಿದ್ಯಾರ್ಥಿಗಳ ಜ್ಞಾನಾರ್ಜನೆಯ ಮಾರ್ಗಗಳಿಗೆ ತಡೆಯೊಡ್ಡುವ ಮೂಲಕ ಶಿಸ್ತನ್ನು ಜಾರಿಗೊಳಿಸುವಂತಿಲ್ಲ ಎಂದೂ ನ್ಯಾಯಾಲಯವು ಎತ್ತಿ ಹಿಡಿದಿದೆ.

ಅಂತರ್ಜಾಲ ಬಳಕೆಯು ಮೂಲಭೂತ ಸ್ವಾತಂತ್ರ್ಯ ಮತ್ತು ಶಿಕ್ಷಣದ ಹಕ್ಕನ್ನು ಖಚಿತಪಡಿಸುವ ಸಾಧನವಾಗಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯು ಎತ್ತಿಹಿಡಿದಿದೆ. ವಿದ್ಯಾರ್ಥಿಗಳ ಹಕ್ಕುಗಳನ್ನು ನಿರ್ಬಂಧಿಸುವ ನಿಯಮ ಅಥವಾ ಸೂಚನೆ ಕಾನೂನಿನ ದೃಷ್ಟಿಯಲ್ಲಿ ಸಿಂಧುವಲ್ಲ ಎಂದು ನ್ಯಾ.ಪಿ.ವಿ.ಆಶಾ ಅವರು ಗುರುವಾರ ನೀಡಿದ ತೀರ್ಪಿನಲ್ಲಿ ಹೇಳಿದ್ದಾರೆ.

 ಹಾಸ್ಟೆಲ್‌ನ ನಿವಾಸಿಗಳಿಗೆ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಹಾಸ್ಟೆಲ್‌ನಲ್ಲಿ ತಮ್ಮ ಮೊಬೈಲ್ ಫೋನ್‌ಗಳ ಬಳಕೆಗೆ ಅವಕಾಶ ನೀಡುತ್ತಿಲ್ಲ ಮತ್ತು ಪದವಿ ತರಗತಿಗಳ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್‌ನಲ್ಲಿ ಲ್ಯಾಪ್‌ಟಾಪ್ ಬಳಕೆಗೂ ಅನುಮತಿಯಿಲ್ಲ. 2019,ಜೂನ್ 24ರಿಂದ ಮೊಬೈಲ್ ನಿಷೇಧವನ್ನು ಸಂಜೆ ಆರು ಗಂಟೆಯಿಂದ ರಾತ್ರಿ 10 ಗಂಟೆಯವರೆಗಿನ ಅವಧಿಗೆ ಬದಲಿಸಲಾಗಿದೆ ಎಂದು ಕಲ್ಲಿಕೋಟೆ ವಿವಿಯಡಿಯ ಅನುದಾನಿತ ಕಾಲೇಜೊಂದರ ಮೂರನೇ ಸೆಮಿಸ್ಟರ್ ಬಿಎ ವಿದ್ಯಾರ್ಥಿನಿ ತನ್ನ ಅರ್ಜಿಯಲ್ಲಿ ದೂರಿದ್ದಳು. ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿ ಮಾತ್ರ ಈ ನಿರ್ಬಂಧವನ್ನು ಹೇರಲಾಗಿದೆ ಎದು ಆಕೆ ಬೆಟ್ಟು ಮಾಡಿದ್ದಳು. ಮೊಬೈಲ್ ಫೋನಗಳ ಮೇಲಿನ ಸಂಪೂರ್ಣ ನಿರ್ಬಂಧ ಮತ್ತು ಅಧ್ಯಯನದ ವೇಳೆೆಯಲ್ಲಿ ಅವುಗಳನ್ನು ಒಪ್ಪಿಸುವಂತೆ ನಿರ್ದೇಶವು ಸಂಪೂರ್ಣ ಅನಗತ್ಯವಾಗಿತ್ತು ಎಂದು ತೀರ್ಪಿನಲ್ಲಿ ಹೇಳಿರುವ ನ್ಯಾಯಾಲಯವು,ಶಿಸ್ತನ್ನು ಜಾರಿಗೊಳಿಸುವಾಗ ಮೊಬೈಲ್ ಫೋನ್‌ಗಳ ಧನಾತ್ಮಕ ಮಗ್ಗಲುಗಳನ್ನು ನೋಡುವುದೂ ಅಗತ್ಯವಾಗಿದೆ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News